ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ( Sand mafia) ನಡೆಯುತ್ತಲೇ ಇದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸ ಕಾಪು ಎಂಬಲ್ಲಿ ರಾಜಾರೋಷವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಇಂದು ಮುಂಜಾನೆ ಮಫ್ತಿಯಲ್ಲಿದ್ದ ಬಂಟ್ವಾಳ ಎಎಸ್ಪಿ ಮತ್ತು ತಂಡ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಎರಡು ದೋಣಿ, ಟಿಪ್ಪರ್ ವಶ
ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿಗಳು ಹಾಗೂ ಎರಡು ಟಿಪ್ಪರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ತಾಲೂಕಿನ ಹಲವೆಡೆ ಮರಳುಗಾರಿಕೆ:
ಅಕ್ರಮ ಮರಳುಗಾರಿಕೆ ( Sand mafia) ವಿರುದ್ಧ ಪ್ರಕರಣಗಳು ಎಷ್ಟೇ ದಾಖಲಾದರು, ಆರೋಪಿಗಳು ಮಾತ್ರ ರಾಜಾರೋಷವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಮುಂಜಾನೆಯಿಂದಲೇ ಆರಂಭವಾಗುವ ಇವರ ಕೆಲಸ ಮಧ್ಯರಾತ್ರಿಯವರೆಗೂ ಮರಳು ತೆಗೆಯುತ್ತಲೇ ಇರುತ್ತಾರೆ. ಕೆಲವೊಮ್ಮೆ ಮಧ್ಯರಾತ್ರಿಯಿಂದ ನಸುಕಿನ ಜಾವದವರೆಗೂ ಮರಳು ಸಾಗಾಟ ನಡೆಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.ಇದನ್ನೂ ಓದಿ: ಫಿಟ್ಟಾಗಿದ್ದ ಸ್ಯಾಂಡಲ್ ವುಡ್ ನ ನಟ ಪುನೀತ್ ಗೆ ಆಗಿದ್ದಾದರೂ ಏನು?
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಲವಂತಿಗೆ, ಮಿತ್ತಬಾಗಿಲು ಮೊದಲಾದ ಪ್ರದೇಶಗಳಲ್ಲಿ ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿಗಳು ಹರಿಯುತ್ತವೆ. ಈ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಭೂ ಕೊರೆತ:
ನದಿ ಪ್ರದೇಶಗಳು ಇರುವ ಸ್ಥಳದಲ್ಲಿ ಮನೆಗಳು ಕಟ್ಟಿಕೊಂಡಿರುವ ಕೃಷಿಕರ ಪಾಡು ಕೇಳುವಂತಿಲ್ಲ. ನದಿ ಹರಿಯುತ್ತಿರುವ ಪಕ್ಕದಲ್ಲೇ ಮರಳುಗಾರಿಕೆ ನಡೆಸುತ್ತಿರುವುದರಿಂದ ನದಿ ಸಮೀಪದಲ್ಲಿರುವ ಕೃಷಿ ಭೂಮಿಗಳಿಗೆ ಸಾಕಷ್ಟು ಹಾನಿ ಉಂಟು ಮಾಡಿದೆ. ನದಿಗಳಿಂದ ಮರಳು ತೆಗೆದರೆ ನದಿಯ ಮಾರ್ಗವು ಬದಲಾಗಿ ಭೂಮಿಗಳನ್ನು ಕೊರೆಯುತ್ತ ಸಾಗುತ್ತದೆ. ಇದರಿಂದ ಸಾಕಷ್ಟು ಭೂಮಿಗಳು ನದಿ ಕೊರೆತದಿಂದ ನದಿ ಪಾಲಾಗಿರುವ ಉದಾಹರಣೆಗಳು ಇವೆ.
ಮರಳು ಸಾಗಿಸಲು ಕಳ್ಳದಾರಿ:
ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳದಿಂದ ಮರಳು ಸಾಗಿಸಲು ಕಳ್ಳ ದಾರಿಮಾಡಿಕೊಂಡು ಟಿಪ್ಪರ್ ಗಳ ಮೂಲಕ ಸಾಗಿಸುತ್ತಾರೆ.
ಇನ್ನು ಕೆಲವರು ಚೀಲಗಳಲ್ಲಿ ಮರಳನ್ನು ತುಂಬಿಸಿಕೊಂಡು ಸಾಗಿಸುತ್ತಾರೆ. ಮುಖ್ಯರಸ್ತೆಯಲ್ಲಿ ಸಾಗುವುದರಿಂದ ಪೊಲೀಸರ ಕಾಟ ಹೆಚ್ಚಾಗುತ್ತದೆ ಎಂದು ಕಳ್ಳದಾರಿಯ ಮೂಲಕ ಮರಳು ಸಾಗಿಸುತ್ತಾರೆ.

ದೂರು ನೀಡಿದರು ನಿಲ್ಲದ ಮರಳು ಸಾಗಾಟ:
ಬೆಳ್ತಂಗಡಿ ತಾಲೂಕಿನಲ್ಲಿ ಹಲವೆಡೆ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರು, ಎರಡು ಮೂರು ದಿನಗಳ ನಂತರ ಅಕ್ರಮ ಮರಳುಗಾರಿಕೆ ನಡೆಯುತ್ತಲೇ ಇರುತ್ತದೆ ಎಂದು ಬೆಳ್ತಂಗಡಿ ತಾಲೂಕಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ತಾಲೂಕು ಮರಳುಗಾರಿಕೆಯ ತಾಣವಾಗಿದ್ದು, ಈ ಬಗ್ಗೆ ಪೊಲೀಸರಲ್ಲಿ ಅಥವಾ ಅಧಿಕಾರಿಗಳಲ್ಲಿ ದೂರು ನೀಡಲು ಹಿಂಜರಿಯುತ್ತಾರೆ. ಈ ಬಗ್ಗೆ ತಹಶೀಲ್ದಾರರು ಸೂಕ್ತ ಕ್ರಮವನ್ನು ಕೈಗೊಂಡು, ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಸ್ಥಳೀಯರ ಅಭಿಪ್ರಾಯವಾಗಿದೆ.