ನಟ ಪುನೀತ್ ರಾಜ್‌ಕುಮಾರ್‌ರವರು ದೇಹದ ಫಿಟ್‌ನೆಸ್‌ಗೆ ಹೆಸರಾಗಿದ್ದವರು. ದೇಹವನ್ನು ಅತ್ಯಾಕರ್ಷಕವಾಗಿ ಕಾಪಾಡಿಕೊಂಡು ವೃತ್ತಿಪರ ಬಾಡಿ ಬಿಲ್ಡರ್‌ನಂತೆ ಕಂಗೊಳಿಸುತ್ತಿದ್ದವರು. ದೃಢಕಾಯ ಹೊಂದಿದವರು ಮಾತ್ರ ಮಾಡಬಹುದಾದ ಸ್ಟೆಪ್‌ಗಳನ್ನು ಮಾಡಿ ಬೆಸ್ಟ್ ಡ್ಯಾನ್ಸರ್ ಎನಿಸಿಕೊಂಡಿದ್ದವರು.
ಅವರು ನಮ್ಮನ್ನು ಅಗಲಿರುವ ಈ ಸಂದರ್ಭದಲ್ಲಿ ಅವರು ಮಾಡುತ್ತಿದ್ದ ವರ್ಕೌಟ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೆಚ್ಚು ವರ್ಕೌಟ್ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಹಾಗಾದರೆ ವ್ಯಾಯಾಮವು ಆರೋಗ್ಯಕ್ಕೆ ಪೂರಕವೋ ಅಥವಾ ಮಾರಕವೋ? ಈ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.
ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುವುದರಿಂದ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ರಕ್ತದೊತ್ತಡ ಅಧಿಕವಾಗುವುದಿಲ್ಲ, ಟೈಪ್ 2 ಮಧುಮೇಹ ಉಂಟಾಗುವುದಿಲ್ಲ, ಖಿನ್ನತೆಯಿಂದ ದೂರವಿರಬಹುದು, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗುತ್ತದೆ, ಸಂಧಿವಾತ ಉಂಟಾಗುವುದಿಲ್ಲ, ಆರಾಮಾಗಿ ನಿದ್ದೆ ಮಾಡಲು ಸಹಾಯಕವಾಗುತ್ತದೆ ಎಂದೆಲ್ಲಾ ಹೇಳಲಾಗುತ್ತದೆ.
ಅತ್ಯುತ್ತಮವಾದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ದೇಹ ದಣಿಸುವುದರಿಂದ ಪಡೆಯಬಹುದು. ಒಂದು ಮಿತಿಯಲ್ಲಿ ವ್ಯಾಯಾಮ ಮಾಡುವುದಾದರೆ, ಇವೆಲ್ಲ ನಿಜವೂ ಹೌದು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಆದರೆ ಅತಿಯಾಗಿ ವರ್ಕೌಟ್ ಮಾಡುವುದರಿಂದ ಏನಾಗುತ್ತದೆ? ಹಲವು ರೀತಿಯಲ್ಲಿ ಶರೀರ ಘಾಸಿಗೊಂಡು, ಆರೋಗ್ಯ ತೀವ್ರವಾಗಿ ಹಾಳಾಗಬಹುದು. ಮೂಳೆ ಮುರಿತದ ಸಾಧ್ಯತೆ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಮಹಿಳೆಯರಾದರೆ, ಋತುಚಕ್ರದಲ್ಲಿನ ಏರುಪೇರಿಗೆ ಕಾರಣವಾಗುತ್ತದೆ.
ದೇಹದಲ್ಲಿನ ಶಕ್ತಿ ಕಡಿಮೆಯಾಗಿ, ಎಲ್ಲದರಲ್ಲೂ ನಿರುತ್ಸಾಹ ಉಂಟಾಗುತ್ತದೆ. ವ್ಯಾಯಾಮಕ್ಕಾಗಿ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಕೂಡ ಆರೋಗ್ಯದ ಮೇಲೆ ಕೆಟ್ಟ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಫಿಟ್ಟಾಗಿದ್ದ ಸ್ಯಾಂಡಲ್ ವುಡ್ ನ ನಟ ಪುನೀತ್ ಗೆ ಆಗಿದ್ದಾದರೂ ಏನು?
ಎಷ್ಟು ವರ್ಕೌಟ್ ಮಾಡುವುದು ಒಳ್ಳೆಯದು ಎಂದು ತಿಳಿಯಲು ನಾವು ನಮ್ಮ ಗರಿಷ್ಠ ಹೃದಯ ದರವನ್ನು ತಿಳಿದುಕೊಂಡಿರಬೇಕು. ಇದನ್ನು ಕಂಡುಹಿಡಿಯುವುದು ತುಂಬಾ ಸುಲಭ. 220ರಿಂದ ನಿಮ್ಮ ವಯಸ್ಸನ್ನು ಕಳೆದರೆ ಗರಿಷ್ಠ ಹೃದಯ ಬಡಿತ ದರ ಸಿಗುತ್ತದೆ. ಇದನ್ನು ಬೀಟ್ಸ್ ಪರ್ ಮಿನಿಟ್‌ನಲ್ಲಿ ಅಳೆಯಲಾಗುತ್ತದೆ. ಉದಾಹರಣೆಗೆ, ನಿಮ್ಮ ವಯಸ್ಸು 30 ಆಗಿದ್ದರೆ, 220ರಲ್ಲಿ 30 ಕಳೆದರೆ 190. ಅಂದರೆ ನಿಮ್ಮ ಗರಿಷ್ಠ ಹೃದಯ ಬಡಿತ ದರವು 190 ಬಿಪಿಎಂ. ಸಾಮಾನ್ಯವಾಗಿ ನಮ್ಮ ಹೃದಯಬಡಿತವು 60ರಿಂದ 100 ಬಿಪಿಎಂ ಆಗಿರುತ್ತದೆ.
ಆರೋಗ್ಯವಂತ ಜನರು ಗರಿಷ್ಠ ಹೃದಯ ಬಡಿತದ ಶೇ. 60ರಿಂದ ಶೇ. 80ರ ತನಕ ಹೃದಯ ಬಡಿತ ಹೆಚ್ಚಾಗುವವರೆಗೆ ವರ್ಕೌಟ್ ಮಾಡಬಹುದು. ಸಿಗರೇಟ್ ಸೇದುವವರು ಅಥವಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಉಳ್ಳವರು ಗರಿಷ್ಠ ಹೃದಯ ಬಡಿತದ ಶೇ. 50ರ ತನಕ ಹೃದಯ ಬಡಿತ ಹೆಚ್ಚಾಗುವವರೆಗೆ ಮಾತ್ರ ವರ್ಕೌಟ್ ಮಾಡಬಹುದು. ಹೃದಯ ಬಡಿತವು ಗರಿಷ್ಠ ಹೃದಯ ಬಡಿತ ದರದ ಶೇ. 95ರಷ್ಟು ತಲುಪುವ ತನಕ ವ್ಯಾಯಾಮ ಮಾಡುವುದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಸದಾ ಕುಂತಲ್ಲೇ ಕುಳಿತಿರಲು, ತಿಂತಲ್ಲೇ ನಿಂತಿರಲು ನಮ್ಮ ದೇಹವು ಯಂತ್ರವಲ್ಲ. ಆರೋಗ್ಯವಾಗಿರಬೇಕೆಂದರೆ ವ್ಯಾಯಾಮವು ಬೇಕೇ ಬೇಕು. ಆದರೆ ಇದಕ್ಕಿರುವ ಮಿತಿಯನ್ನು ತಿಳಿದುಕೊಂಡಿರಬೇಕು. ಸೋಶಿಯಲ್ ಮೀಡಿಯಾಗಳಲ್ಲಿ ದೃಢಕಾಯದ ಸೆಲ್ಫಿ ಹಾಕಲೆಂದೋ, ಅಥವಾ ಸ್ನೇಹಿತರ ವಲಯದಲ್ಲಿ ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದೋ ಅಥವಾ ಹೆಚ್ಚು ವರ್ಕೌಟ್ ಮಾಡಿದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಭ್ರಮೆಯಿಂದಲೇ ಅತಿಯಾಗಿ ವ್ಯಾಯಾಮ ಮಾಡಿದರೆ ಮಾರಣಾಂತಿಕ ಪರಿಣಾಮ ಎದುರಿಸಬೇಕಾಗುತ್ತದೆ.
ದೈಹಿಕ ತಜ್ಞರ ಅಥವಾ ವೈದ್ಯರ ಸಲಹೆಯೊಂದಿಗೆ, ಎಷ್ಟು ವ್ಯಾಯಾಮ ಮಾಡಬೇಕು ಹಾಗೂ ಇದಕ್ಕಾಗಿ ಆಹಾರಕ್ರಮ ಹೇಗಿರಬೇಕೆಂದು ನಿರ್ಧರಿಸಿಕೊಂಡು ಮುನ್ನಡೆಯುವುದು ಒಳ್ಳೆಯದು.