ನವದೆಹಲಿ : ಪೆಟ್ರೋಲ್ ಡೀಸೆಲ್ ( petrol-diesel ) ಬೆಲೆಏರಿಕೆಯಿಂದ ಬಸವಳಿದಿದ್ದ ಜನಸಾಮಾನ್ಯರಿಗೆ ಕೇಂದ್ರ ದೀಪಾವಳಿ ಬಂಪರ್ ಗಿಫ್ಟ್ ನೀಡಿದೆ. ಹಲವು ತಿಂಗಳಿಂದ ಏರಿಕೆ ಕ್ರಮವನ್ನೇ ನೋಡುತ್ತಿದ್ದ ಇಂಧನ ಬೆಲೆ ಈಗ ಭಾರಿ ಇಳಿಕೆ ಕಂಡಿದೆ.
ಮಹತ್ವದ ಚರ್ಚೆಯ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮೇಲೆ 5 ರೂ, ಡಿಸೇಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದ್ದು ದೀಪಾವಳಿಗೆ ಪ್ರಧಾನಿ ಮೋದಿ ಬಾರಿ ಉಡುಗೊರೆ ನೀಡಿದಂತಾಗಿದೆ.

ಕಳೆದ ಕೆಲ ತಿಂಗಳಿನಿಂದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ನಿರಂತರವಾಗಿತ್ತು. ಅಕ್ಟೋಬರ್ ಒಂದೇ ತಿಂಗಳಲ್ಲಿ ಸುಮಾರು 30 ಕ್ಕೂ ಅಧಿಕ ಬಾರಿ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಕೆಯನ್ನು ಕಂಡಿತ್ತು. ಇದರಿಂದ ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮ ಬೀರುವುದಲ್ಲದೇ ಪೆಟ್ರೋಲ್ ಡಿಸೇಲ್ ಅವಲಂಬಿತ ಎಲ್ಲ ವಸ್ತುಗಳ ಬೆಲೆಯೂ ಅಧಿಕವಾಗಿತ್ತು.
ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ನಿರಂತರವಾದ ಏರಿಕೆಯು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಕಾರಣವಾಗಿತ್ತು. ಜನ ಸಾಮಾನ್ಯರ ಆಕ್ರೋಶ ಎದುರಿಸಲಾಗದೇ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಹ ಮಾಡಿದ್ದವು. ಇದನ್ನು ಪರಿಗಣನೆಗೆ ತೆಗೆದುಕೊಂಡ ಪ್ರಧಾನಿ ಮೋದಿ ಈಗ ಇಂಧನ ಬೆಲೆಯ ಸುಂಕ ಕೊಂಚ ಕಡಿಮೆಗೊಳಿಸಿ ದೀಪಾವಳಿ ಸಮಯಕ್ಕೆ ಜನ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಮನೆ ಮನೆಗೇ ತೆರಳಿ ಕೋವಿಡ್ ಲಸಿಕೆ ಕೊಡಲಿದ್ದಾರೆ ಆರೋಗ್ಯ ಕಾರ್ಯಕರ್ತರು!
ರೈತರ ಮತ್ತು ಜನ ಸಾಮಾನ್ಯರ ಹಿತ ಕಾಯಲು ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿದರು, ಮುಂಬರುವ ಪಂಚರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಅದೇನೆ ಇದ್ದರೂ ಸದ್ಯ ಬೆಲೆ ಇಳಿಕೆಯಿಂದ ದೇಶದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಐದು ರೂಪಾಯಿ ಡಿಸೇಲ್ ಬೆಲೆಯಲ್ಲಿ ಹತ್ತು ರೂಪಾಯಿ ಕಡಿಮೆಗೆ ಲಭ್ಯವಾಗಲಿದ್ದು ಜನರು ಒಂದಷ್ಟು ನಿರಾಳವಾಗಬಹುದಾಗಿದ್ದು, ಹಬ್ಬಸ ಖುಷಿಯನ್ನು ದುಪ್ಪಟ್ಟು ಮಾಡಿದೆ.