ರಾಮನಗರ: ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕಾರ್ಯಕರ್ತರ ಒತ್ತಾಸೆ ಮೇರೆಗೆ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದೆವು ಹೊರತು ನಮಗೆ ಈ ಫಲಿತಾಂಶದ ಬಗ್ಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ಇಂದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಮಾತನಾಡಿರುವ ಅವರು, ಹಾನಗಲ್ ಕ್ಷೇತ್ರದಲ್ಲಿ ನಮಗೆ ತಳಹದಿಯೇ ಇಲ್ಲ, ಹೀಗಿರುವಾಗ ಅಲ್ಲಿನ ಫಲಿತಾಂಶದ ಬಗ್ಗೆ ಹೆಚ್ಚು ನಿರೀಕ್ಷೆಯಿರಲಿಲ್ಲ, ಉಪ ಚುನಾವಣೆಗೆ ನಾನು ಹೆಚ್ಚು ಒತ್ತು ನೀಡುವುದಿಲ್ಲ ಎಂದರು. ಆದರೆ ಸಿಂದಗಿಯಲ್ಲಿ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ, ಪಕ್ಷ ಸಂಘಟನೆಯ ಕೊರತೆಯೇ ನಮ್ಮ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು.
ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ 4 ಸಾವಿರದ 353 ಮತಗಳು, ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇದುವರೆಗೆ ಕೇವಲ 629 ಮತಗಳನ್ನು ಗಳಿಸಿದ್ದಾರೆ.