ಸಿಂಧಗಿ : ತೀವ್ರ ಕುತೂಹಲ ಮೂಡಿಸಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ವಿಜಯಲಕ್ಷ್ಮಿ ಎರಡು ರಾಷ್ಟ್ರೀಯ ಪಕ್ಷಗಳಿಗೂ ಸಮನಾಗಿ ಒಲಿದಿದ್ದಾಳೆ. ಸಿಂಧಗಿಯಲ್ಲಿ ಬಿಜೆಪಿಯ ರಮೇಶ ಭೂಸನೂರ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದ್ದರೆ. ಹಾನಗಲ್ ನಲ್ಲಿ ಕೊನೆಯ ಹಂತದ ಮತ ಎಣಿಕೆಯವರೆಗೂ ಕಾಂಗ್ರೇಸ್ ಮುನ್ನಡೆ ಸಾಧಿಸಿದೆ.

ಸಿಂಧಗಿಯಲ್ಲಿ ಮೊದಲ ಸುತ್ತಿನ ಮತ ಎಣಿಕೆಯಿಂದಲೂ ನಿರಂತರ ಮುನ್ನಡೆ ಕಾಯ್ದಿರಿಸಿಕೊಂಡಿದ್ದ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಸಿಂಧಗಿಯಲ್ಲಿ ಬಿಜೆಪಿ ಗೆಲುವಿನ ಹಿನ್ನಲೆಯಲ್ಲಿ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ಕಾರ್ಯಕರ್ತರು ಬಣ್ಣ ಹಚ್ಚಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡಿರುವ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ಇದನ್ನೂ ಓದಿ: ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ ದೀಪಾವಳಿ!
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 93,865 ಮತಗಳನ್ನು ಪಡೆಯುವ ಮೂಲಕ 31,185 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಾರೀ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,680 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4323 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.