ಬೆಂಗಳೂರು : ನಗರದ ಹೊರವಲಯದ ಬನ್ನೇರುಘಟ್ಟ ಸಮೀಪವಿರುವ ಶ್ಯಾನುಭೋಗಹಳ್ಳಿಯಲ್ಲಿ ಪವರ್ ಸ್ಟಾರ್ ಪುನೀತ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತಿಚೇಗೆ ಖ್ಯಾತ ಕನ್ನಡ ನಟ, ನಿರ್ಮಾಪಕ ಪುನೀತ್ ರಾಜ್‌ಕುಮಾರ ಅಕಾಲಿಕವಾಗಿ ನಿಧನಹೊಂದಿದರು. ಅವರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳು ಅತ್ಯಂತ ಶಾಂತಿ ಪೂರ್ವಕವಾಗಿ ನಡೆದಿತ್ತು. ಇನ್ನು ಪುನೀತ್ ಅವರ ನಿಧನ ಹೊಂದಿದ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದರು.

ಪುನೀತ್ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಅವರ ಅಭಿಮಾನಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಸತ್ತ ನಂತರ ತನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಬರೆದಿರುವ ಆತ ಅಪ್ಪಟ ತನ್ನ ನೆಚ್ಚಿನ ನಟನ ಮಾದರಿಯಲ್ಲಿ ನೇತ್ರದಾನ ಮಾಡಲು ಈ ಕ್ರಮಕ್ಕೆ ಮುಂದಾದ ಎಂದು ಆತನ ಸಂಭಂದಿಕರು ತಿಳಿಸಿದ್ದಾರೆ.
ಮೃತನನ್ನು ರಾಜೆಂದ್ರ (40) ಎಂದು ಗುರುತಿಸಲಾಗಿದೆ. ಈತ ಬನ್ನೇರುಘಟ್ಟ ಸಮೀಪದ ಶ್ಯಾನುಭೋಗಹಳ್ಳಿಯ ನಿವಾಸಿಯಾಗಿದ್ದು ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಎನ್ನಲಾಗಿದೆ. ಪುನೀತ್ ಸಾವಿನಿಂದ ವಿಚಲಿತನಾಗಿದ್ದ ಈತ ಪುನೀತ್ ಅವರ ಬಗ್ಗೆ ಸದಾ ಮಾತನಾಡುತ್ತಿದ್ದ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.