ಬೆಂಗಳೂರು :- ನಟ ಪುನೀತ್ ರಾಜಕುಮಾರ್ (puneeth rajkumar ) ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರರಂಗದ ಹಿರಿಯರು, ಗಣ್ಯರು ಹಾಗೂ ಕುಟುಂಬಸ್ಥರು ಭಾಗಿಯಾಗಿ, ಅಂತಿಮ ನಮನ ಸಲ್ಲಿಸಿದ್ದಾರೆ.
ನಟ ಪುನೀತ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ನಾಡು ಕಂಬನಿ ಮಿಡಿದಿತ್ತು. ನಿನ್ನೆ (ಅಕ್ಟೋಬರ್ 30) ಅಭಿಮಾನಿಗಳಿಗೆ ದರ್ಶನಕ್ಕೆಂದು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಖ್ಯಾತ ತಾರೆಯರು, ವಿವಿಧ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿ ಬಳಗ ಪುನೀತ್ ದರ್ಶನ ಪಡೆದು ನಮನ ಸಲ್ಲಿಸಿದರು.
ಇಂದು (ಭಾನುವಾರ) ಮುಂಜಾನೆ 4ಕ್ಕೆ ಸಾರ್ವಜನಿಕರಿಗೆ ದರ್ಶನವನ್ನು ಅಂತ್ಯಗೊಳಿಸಲಾಯಿತು. ಕೊನೆಯದಾಗಿ ಭದ್ರತಾ ಪಡೆಗಳು ನಟನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತಿಟ್ಟು, ಅಂತಿಮ ನಮನ ಸಲ್ಲಿಸಿದರು.
ಅಲ್ಲಿಂದ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕರೆತರಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಿದವು.ಡಾ.ರಾಜ್ ಸಮಾಧಿಯಿಂದ 125 ಅಡಿ ಅಂತರದಲ್ಲಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿದೆ.
ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ.ಅಶ್ವತ್ಥ್, ಆರ್.ಅಶೋಕ್, ಸುಧಾಕರ್, ಗೋಪಾಲಯ್ಯ, ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರು ಭಾಗಿಯಾಗಿದ್ದರು.

ಸ್ಯಾಂಡಲ್‌ವುಡ್ ನಟರಾದ ರವಿಚಂದ್ರನ್, ಸುದೀಪ್, ಯಶ್, ಜಗ್ಗೇಶ್, ದುನಿಯಾ ವಿಜಯ್, ಉಪೇಂದ್ರ, ಗಣೇಶ್, ಸಾಧು ಕೋಕಿಲ, ನಟಿಯರಾದ ಉಮಾಶ್ರೀ, ಶ್ರುತಿ, ತಾರಾ, ರಚಿತಾ ರಾಮ್ ಸೇರಿದಂತೆ ಹಲವರು ಭಾಗಿಯಾಗಿದ್ರು.