ಬೆಂಗಳೂರು: ಇಂದು ಬೆಳಗ್ಗೆಯಿಂದಲೂ ಟಾಲಿವುಡ್ ನಟರು ನಟ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ಸ್‌ಗೂ ರಾಜ್ ಕುಟುಂಬಕ್ಕೂ ಬಹಳ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಟಾಲಿವುಡ್ ನಟರು ಬೆಂಗಳೂರಿಗೆ ಆಗಮಿಸಿದಾಗ ಅಣ್ಣಾವ್ರ ಮನೆಗೆ ಭೇಟಿ ನೀಡದೆ ಹಿಂದುರುಗುತ್ತಿರಲಿಲ್ಲ. ಅದೇ ರೀತಿ ರಾಜ್ ಕುಟುಂಬದವರು ಟಾಲಿವುಡ್ ಸ್ಟಾರ್ಸ್‌ಗಳ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಯಾಗ್ತಾ ಇದ್ರು. ಇಂದು ರಾಜ್ ಕುಟುಂಬದ ದುಃಖದಲ್ಲಿಯೂ ಟಾಲಿವುಡ್ ನಟರು ಭಾಗಿಯಾಗಿದ್ದಾರೆ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್, ನಟ ಶ್ರೀಕಾಂತ್ ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವಾರು ನಟರು ಪುನೀತ್ ಅವರ ದರ್ಶನವನ್ನು ಪಡೆದು ಶಿವಣ್ಣ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಚಿರಂಜೀವಿ, ರಾಜಕುಮಾರ್ ಅವರ ಕುಟುಂಬದ ಜೊತೆ ಬಹಳ ವರ್ಷಗಳಿಂದ ಆತ್ಮೀಯವಾದ ಸಂಬಂಧ ನಮಗಿದೆ. ಅವರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ನಮ್ಮನ್ನ ಆಹ್ವಾನಿಸುತ್ತಿದ್ದರು. ನಮ್ಮ ಮನೆಗಳ ಶುಭ ಕಾರ್ಯದಲ್ಲಿ ಅವರೂ ಭಾಗಿಯಾಗ್ತಾರೆ. ಪುನೀತ್ ಅವರನ್ನು ಯಾವತ್ತೂ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ.. ಅವರ ಅಗಲಿಕೆ ತುಂಬಾ ನೋವು ತಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಪುನೀತ್ ಜೊತೆಗಿನ ಕ್ಷಣಗಳನ್ನು ಹಂಚಿಕೊಂಡ ಪರಮೇಶ್ವರ ಗುಂಡ್ಕಲ್!
ನಂತರ ಮಾತನಾಡಿದ ನಟ ಶ್ರೀಕಾಂತ್, ಅಪ್ಪು ಅವರ ಜೊತೆ ನಾನು ಜೇಮ್ಸ ಸಿನಿಮಾದಲ್ಲಿ ನಟನೆ ಮಾಡಿದ್ದೇನೆ. 45 ದಿನ ಅವರ ಜೊತೆ ನಾನು ಕಾಲ ಕಳೆದಿದ್ದೇನೆ. ಅವರು ಸರಳವಾಗಿ ಹೇಗೆ ಇರುತ್ತಿದ್ದರು, ಸಹ ಕಲಾವಿದರನ್ನು ಹೇಗೆ ಗೌರವವನ್ನು ಕೊಡುತ್ತಿದ್ದರು ಎಂಬುದು ಕಣ್ಣಾರೆ ನೋಡಿದ್ದೇನೆ. ಹೇಗೆ ಆಗಬಾರದಿತ್ತು ಎಂದು ಕನ್ನಡ ಕನ್ನಡದಲ್ಲಿ ಮಾತನಾಡುತ್ತ ಹೇಳಿದರು.

ಇನ್ನೂ ಬೆಳಿಗ್ಗೆ ಬೆಂಗಳೂರಿಗೆ ಬಂದಂತಹ ನಟ ಬಾಲಕೃಷ್ಣ ಅವರು ಪುನೀತ್ ರಾಜಕುಮಾರ್ ಅವರಿಗೆ ಪುಷ್ಪನಮನವನ್ನು ಸಲ್ಲಿಸಿದ್ರು. ಪುನೀತ್‌ನನ್ನ ಕಳೆದುಕೊಂಡಿರುವುದು ತೀವ್ರ ದುಃಖವಾಗ್ತಿದೆ. ಪರಿಶ್ರಮದಿಂದ ಮೇಲೆ ಬಂದಂತಹ ನಟ ಪುನೀತ್. ನಮ್ಮ ತಂದೆ ಕಾಲದಿಂದಲೂ ರಾಜಕುಮಾರ್ ಕುಟುಂಬದೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ಪುನೀತ್ ಹಠಾತ್ ಸಾವು ನಿಜಕ್ಕೂ ನಂಬಲಾಗುತ್ತಿಲ್ಲ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಕಣ್ಣೀರಿಡುತ್ತಾ ಭಾವುಕರಾದರು.
ಇನ್ನು ಪುನೀತ್ ರಾಜಕುಮಾರ್ ಅವರ ಮಗಳು ದೃತಿ ನ್ಯೂಯಾರ್ಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕಂಠೀರವ ಸ್ಟೇಡಿಯಂ ಭೇಟಿ ನೀಡಿದ ದೃತಿ ತಂದೆಯ ಪಾರ್ಥಿವ ಶವ ಕಂಡು ಕಣ್ಣೀರಿಡುತ್ತಿದ್ದಾರೆ.