ನಿನ್ನೆಯಿಂದಲೇ ಆರೋಗ್ಯದಲ್ಲಿ ತೊಂದರೆ ಅನುಭವಿಸಿದ್ದ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಆಘಾತವನ್ನು ಉಂಟು ಮಾಡಿದೆ. ಲವಲವಿಕೆಯಿಂದ ಇದ್ದ ನಟ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದು ಹಲವರಿಗೆ ಶಾಕ್ ನೀಡಿದೆ.
ಆದರೆ ಪುನೀತ್ ರಾಜ್ ಕುಮಾರ್ ಅವರನ್ನು ನಿನ್ನೆ ನಡೆದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ನಟ ರಮೇಶ್ ಅರವಿಂದ್ ನಿನ್ನೆಯ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
” ಗುರುಕಿರಣ್ ಅವರ ಮನೆಯಲ್ಲಿ ಪಾರ್ಟಿ ನಡೆದಿತ್ತು. ನಿನ್ನೆ ರಾತ್ರಿ ಎಲ್ಲರ ಜೊತೆ ಚನ್ನಾಗಿ ಆರಾಮಾಗಿ ಇದ್ದರು, ಬಹಳ ಲವಲವಿಕೆಯಿಂದ ಮಾತನಾಡುತ್ತಿದ್ದರು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ಇಂದು ಆಗಿದ್ದು ಏನು?:
ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದರೂ ಪುನೀತ್ ಇಂದು ಜಿಮ್ ವರ್ಕೌಟ್ ಮಾಡಿದ್ದಾರೆ. ಫಿಟ್ನೆಸ್ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಅವರು ವ್ಯಾಯಾಮದಲ್ಲಿ ತೊಡಗಿಸಿಕೊಂಡ ಬಳಿಕ ಸುಸ್ತಿನಿಂದ ಕುಸಿದಿದ್ದಾರೆ.
ಕುಸಿದುಬಿದ್ದ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಿಕ್ರಂ ಆಸ್ಪತ್ರೆಯ ಮೂಲಗಳ ಪ್ರಕಾರ, ಪುನೀತ್ ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಅವರ ಪ್ರಾಣ ಹೋಗಿತ್ತು. ಅವರಿಗೆ ಹೃದಯಾಘಾತದ ರೀತಿಯ ಮಸ್ಸಿವ್ ಸ್ಟ್ರೋಕ್ ಆಗಿತ್ತು.
ಪುನೀತ್ ಸದ್ಯ ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದ ಪೋಸ್ಟರ್ ಕಳೆದ ಆಗಸ್ಟ್ ತಿಂಗಳಿನಲ್ಲಿ ರಿಲೀಸ್ ಆಗಿತ್ತು. ಹೊಸ ಪೋಸ್ಟರ್ ದೀಪಾವಳಿ ವೇಳೆಗೆ ಬಿಡುಗಡೆ ಆಗಲಿದೆ ಎಂದು ನಿರ್ದೇಶಕರು ಹೇಳಿದ್ದರು.
ಕನ್ನಡ ನಟರಲ್ಲಿ ಉತ್ತಮ ಫಿಟ್ನೆಸ್ ಹೊಂದಿದ್ದ ಪುನೀತ್ ರಾಜ್ ಕುಮಾರ್ ನಿಧನ ಆಗಿರುವುದು ಅವರ ಅಭಿಮಾನಿಗಳಲ್ಲಿ, ಕನ್ನಡ ಪ್ರೇಮಿಗಳಲ್ಲಿ ದೊಡ್ಡ ಶಾಕ್ ನೀಡಿದೆ. ಬಾಲ ನಟ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪುನೀತ್ ಇನ್ನಷ್ಟು ಸಾಧನೆ ಮಾಡುವ ಹಾದಿಯಲ್ಲಿ ಸಾಗುತ್ತಿರುವಾಗಲೇ ವಿಧಿವಶ ವಾಗಿರುವುದು ದುರಂತ ಎನಿಸಿದೆ.