ಬೆಂಗಳೂರು: ಸ್ಯಾಂಡಲ್ವುಡ್ನ ರಾಜಕುಮಾರ ನಟ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದೆ. ಅಪ್ಪು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ಏನನ್ನೂಹೇಳಲು ಸಾಧ್ಯವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ದೌಡಯಿಸುತ್ತಿರುವ ಹಿನ್ನೆಲೆ, ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ಬೆಳಿಗ್ಗೆ ಮನೆಯಲ್ಲಿ ವ್ಯಾಯಾಮ ಮಾಡುವಾಗ ಸ್ವಲ್ಪ ಎದೆನೋವು ಕಾಣಿಸಿಕೊಂಡಿದ್ದು, ಆಗಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಇಸಿಜಿ ಮಾಡಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ಕರೆತರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪುನೀತ್ ಆರೋಗ್ಯ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ, ಸಿಎಂ ಬಸವರಾಜ ಬೊಮ್ಮಾಯಿ, ನಟ ಯಶ್, ನಟ ನಿಖಿಲ್ ಕುಮಾರಸ್ವಾಮಿ ಚಿತ್ರರಂಗದ ಗಣ್ಯರು ನಿರ್ದೇಶಕರು, ನಟ ನಟಿಯರು ಹಾಗೂ ನಿರ್ಮಾಪಕರು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ನಟ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಆಸ್ಪತ್ರೆಗೆ ಬಂದಿದ್ದಾರೆ.

ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಕೆಲಸಕಾರ್ಯಗಳಲ್ಲಿ ನಟ ಶಿವರಾಜ್ ಕುಮಾರ್ ಅವರು ತೊಡಗಿಸಿಕೊಂಡಿದ್ದರು. ತಮ್ಮನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಶಿವರಾಜಕುಮಾರ್ ಸ್ಥಳದಲ್ಲಿಯೇ ಕಣ್ಣೀರಿಟ್ಟು, ಆಸ್ಪತ್ರೆಗೆ ದೌಡಾಯಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿತ್ತು. ಅದಾದನಂತರ ಈಗ ಜೇಮ್ಸ್ ಚಿತ್ರೀಕರಣದ ಹಂತದಲ್ಲಿದೆ. ಇದರ ಜೊತೆಗೆ ದ್ವಿತ್ವ ಸೆಟ್ಟೇರಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂ ಅವರು ನಿರ್ಮಾಣ ಮಾಡ್ತಿದ್ದಾರೆ.