ಚಾಮರಾಜನಗರ: ನಟ ಪುನೀತ್ ರಾಜಕುಮಾರ್ (Puneeth Rajkumar) ಸಾವಿನ ಸುದ್ದಿ ಕೇಳಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಪುನೀತ್ ರಾಜಕುಮಾರ್ ಸಾವಿನ ಸುದ್ದಿ ಕೇಳಿದಂತಹ ಮರೂರು ಗ್ರಾಮದ 30 ವರ್ಷದ ಅಭಿಮಾನಿ ಮುನಿಯಪ್ಪ ಸಾವನ್ನಪ್ಪಿದ್ದಾರೆ.
ಪುನೀತ್ ಸಾವಿನ ಸುದ್ದಿ ಕೇಳಿದಂತಹ ಮುನಿಯಪ್ಪ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕನ್ನಡದ ಪ್ರತಿಭಾನ್ವಿತ ನಟ ಪುನೀತ್ ರಾಜಕುಮಾರ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ತನ್ನ ನೆಚ್ಚಿನ ನಟನ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗದ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲಿಯೇ ಸಾಗಿರುವ ನಟ ಪುನೀತ್ ರಾಜಕುಮಾರ್ ನೇತ್ರದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ. ಪುನೀತ ನಿಧನಕ್ಕೆ ನಾಡು ಅಪಾರ ಶೋಕದಲ್ಲಿ ಮುಳುಗಿದ್ದು ಸಂತಾಪ ಸೂಚಿಸಲಾಗುತ್ತಿದೆ.