ಪ್ರತಿಯೊಬ್ಬರೂ ಸುಂದರವಾದ, ಸದೃಢ ತಲೆಗೂದಲನ್ನು ಬಯಸುತ್ತಾರೆ. ಪುರುಷರಾಗಲೀ, ಮಹಿಳೆಯರಾಗಲಿ ಸುಂದರವಾಗಿ ಕಾಣಲು ತಲೆಗೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆಧುನಿಕ ಜೀವನಶೈಲಿ, ಒತ್ತಡದ ಬದುಕಿನಿಂದ 25-30 ರ ವಯಸ್ಸಿನಲ್ಲಿಯೇ ಪುರುಷರು ತಲೆ ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರೂ ಮಾಲಿನ್ಯ, ಒತ್ತಡದ ಬದುಕಿನಿಂದ ತಲೆ ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತಾರೆ.

ಆದರೆ ಅಡುಗೆಗೆ ಬಳಕೆಯಾಗುವ, ಸಾಮಾನ್ಯವಾಗಿ ಬಾಯಿಯ ವಾಸನೆಗೆ ಕಾರಣವಾಗುತ್ತದೆ ಎಂದು ಎಲ್ಲರೂ ದೂರ ಇಡಲು ಬಯಸುವ ಈರುಳ್ಳಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು. ಇದು ಕೂದಲ ಬುಡವನ್ನು ಗಟ್ಟಿ ಮಾಡುವ ಜೊತೆಗೆ ಈಗಾಗಲೇ ಕೂದಲು ಉದುರಿ ಹೋಗಿ ಬಕ್ಕ ಉಂಟಾದ ಜಾಗದಲ್ಲಿ ಮತ್ತೆ ಕೂದಲು ಚಿಗುರುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಚಾರ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವ ಹಲವರ ಮೊಗದಲ್ಲಿ ಸಂತಸವನ್ನು ಉಂಟು ಮಾಡದೆ ಇರದು.

ಈರುಳ್ಳಿಯ ವಿಶೇಷತೆ – ಆಂಟಿ ಆಕ್ಸಿಡೆಂಟ್ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಗಂಧಕದ ಅಂಶ ಹೊಂದಿರುವ ಈರುಳ್ಳಿ ತಲೆ ಕೂದಲ ಸಮಸ್ಯೆಗೆ ಮಾತ್ರ ರಾಮಬಾಣವಲ್ಲ. ಇದು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುವ, ರಕ್ತದೊತ್ತಡ ತಗ್ಗಿಸುವ ಕೆಲಸವನ್ನೂ ಮಾಡುತ್ತದೆ. 100 ಗ್ರಾಂ ಈರುಳ್ಳಿಯಲ್ಲಿ 40 ಕ್ಯಾಲೋರಿ ಮಾತ್ರ ಇರುತ್ತದೆ. ಇದರಲ್ಲಿ ಶೇ. 85 ರಷ್ಟು ನೀರು, 1.1 ಗ್ರಾಂ ಪ್ರೋಟೀನ್, 9.3 ಗ್ರಾಂ ಕಾರ್ಬೋಹೈಡ್ರೇಟ್, 4.2 ಗ್ರಾಂ ಸಕ್ಕರೆ, 1.7 ಗ್ರಾಂ ನಷ್ಟು ನಾರು ಪದಾರ್ಥ, 0.1 ಗ್ರಾಂ ನಷ್ಟು ಕೊಬ್ಬಿನ ಅಂಶ ಇರುತ್ತದೆ.

ಇದರ ಜೊತೆಗೆ ಚರ್ಮ ಮತ್ತು ಕೂದಲನ್ನು ನಿರ್ವಹಣೆ ಮಾಡಲು ಸಹಾಯಕವಾಗುವ ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿಯ ಬಳಕೆ ತಲೆ ಕೂದಲ ಅರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ಇದಲ್ಲದೆ ಕೆಂಪು ರಕ್ತ ಕಣಗಳ ಸೃಷ್ಟಿಗೆ ಕಾರಣವಾಗುವ ವಿಟಮಿನ್ ಬಿ6, ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುವ ಬಿ9, ಹೃದಯದ ಅರೋಗ್ಯ, ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುವ ಪೊಟಾಶಿಯಂನ್ನು ಇದು ಒಳಗೊಂಡಿದೆ.

ತಲೆಕೂದಲ ವೃದ್ಧಿಗೆ ಬಳಕೆ ಹೇಗೆ ? – ಹಸಿಯಾಗಿ ಈರುಳ್ಳಿಯನ್ನು ತಲೆ ಕೂದಲಿಗೆ ಹಚ್ಚಬಹುದು. ಇಲ್ಲವೇ ಈರುಳ್ಳಿಯನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಕಾಯಿಸಿ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಬಹುದಾಗಿದೆ. ಮೊದಲ ವಿಧಾನದಲ್ಲಿ ಈರುಳ್ಳಿಯ ಸಿಪ್ಪೆ ತೆಗೆದು ಸ್ವಲ್ಪ ಭಾಗವನ್ನು ಚೆನ್ನಾಗಿ ಜಜ್ಜಬೇಕು. ಈ ರಸಕ್ಕೆ ಕೊಬ್ಬರಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ತಲೆಯನ್ನು ಸೀಗೆ ಹುಡಿಯಲ್ಲಿ ಚೆನ್ನಾಗಿ ತೊಳೆಯಬೇಕು. ಈ ರೀತಿ ದಿನ ಅಥವಾ ಎರಡು ದಿನಕ್ಕೊಮ್ಮೆ ತಲೆಗೆ ಈರುಳ್ಳಿ ರಸವನ್ನು ಹಚ್ಚಬಹುದು. ಪ್ರತೀ ಬಾರಿ ಈರುಳ್ಳಿ ರಸವನ್ನು ಹೊಸದಾಗಿ ತಯಾರಿಸಿ ಬಳಕೆ ಮಾಡುವುದು ಬಹಳ ಮುಖ್ಯ.

ಎರಡನೇ ವಿಧಾನದಲ್ಲಿ ಈರುಳ್ಳಿಯನ್ನು ಕತ್ತರಿಸಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಬೇಕು. ಎಣ್ಣೆ ಚೆನ್ನಾಗಿ ಕುದಿದ ಬಳಿಕ ಈರುಳ್ಳಿಯನ್ನು ಎಣ್ಣೆಗೆ ಹಾಕಿ ಅದು ರಸ ಬಿಡುವವರೆಗೆ ಕಾಯಿಸಬೇಕು. ಬಳಿಕ ಈರುಳ್ಳಿಯನ್ನು ಹಿಂಡಿ ಬೇರ್ಪಡಿಸಬೇಕು. ಹೀಗೆ ತಯಾರಾದ ಈರುಳ್ಳಿ ಎಣ್ಣೆ ಹಳದಿ ಬಣ್ಣ ಹೊಂದಿರುತ್ತದೆ. ಇದನ್ನು ತಲೆಕೂದಲಿಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ಅರ್ಧ ಗಂಟೆಯ ಬಳಿಕ ತಲೆಕೂದಲನ್ನು ಚೆನ್ನಾಗಿ ತೊಳೆಯಬೇಕು. ಈರುಳ್ಳಿ ರಸವನ್ನು ತಲೆಗೆ ಹಾಕಿದಾಗ ಕಣ್ಣು ಸ್ವಲ್ಪ ಉರಿದ ಅನುಭವ ಆಗಬಹುದು.

ಈ ರೀತಿ ಈರುಳ್ಳಿ ರಸ ಹಾಕಿದ ಎರಡು-ಮೂರು ವಾರಗಳಲ್ಲಿ ಕೂದಲು ಇಲ್ಲದ ಜಾಗದಲ್ಲಿ ರಂಧ್ರಗಳು ಉಂಟಾಗಿ ಹೊಸ ಕೂದಲು ಬೆಳೆಯುವುದು ಕಂಡು ಬರುತ್ತದೆ. ತಲೆಕೂದಲು ತುಂಬಾ ಉದುರಿದ್ದರೆ ಪೂರ್ಣ ಪ್ರಮಾಣದಲ್ಲಿ ಮತ್ತೆ ಕೂದಲು ಬೆಳೆಯಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈರುಳ್ಳಿ ರಸ ಹಚ್ಚುತ್ತಾ ಹೋದಂತೆ ಕೂದಲ ಬುಡ ಗಟ್ಟಿಯಾಗುವ ಜೊತೆಗೆ ಕೂದಲ ಅರೋಗ್ಯದಲ್ಲೂ ವೃದ್ಧಿ ಕಂಡು ಬರುತ್ತದೆ.

ತಲೆಕೂದಲ ಆರೋಗ್ಯದ ದೃಷ್ಟಿಯಿಂದ ಈರುಳ್ಳಿಯನ್ನು ಬಳಕೆ ಮಾಡುವ ಜೊತೆಗೆ ರಸಾಯನಿಕ ಶ್ಯಾಂಪೂಗಳ ಬಳಕೆಯನ್ನು ಬಿಡಬೇಕು. ತಲೆಕೂದಲಿನ ಅರೋಗ್ಯದ ದೃಷ್ಟಿಯಿಂದ ತಣ್ಣೀರನ್ನು ಬಳಕೆ ಮಾಡುವುದು ಸೂಕ್ತಕರ. ಒಂದು ವೇಳೆ ತಣ್ಣೀರು ಬಳಸಲು ಸಾಧ್ಯವಿಲ್ಲ ಎಂದಾದರೆ ಉಗುರು ಬೆಚ್ಚಗಿನ ನೀರಿಗಿಂತ ಹೆಚ್ಚಿನ ಬಿಸಿನೀರನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಲು ಹೋಗಬಾರದು.