ಮುಂಬೈ : ಮುಂಬೈನ (Mumbai) ಪರೇಲ್ ಪ್ರದೇಶದ ಬಹುಮಹಡಿ ವಸತಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರಿ ರಸ್ತೆಯ ಅವಿಗ್ನಾ ಪಾರ್ಕ್ (Avighna Park) ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅವಿಗ್ನಾ ಪಾರ್ಕ್ (Avighna Park) ಕಟ್ಟಡದ 19 ನೇ ಮಹಡಿಯಿಂದ 30 ವರ್ಷದ ವ್ಯಕ್ತಿ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತನನ್ನು ಅರುಣ್ ತಿವಾರಿ (Arun Tiwari) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯಕ್ತಿ ಬೀಳುತ್ತಿರುವ ವಿಡಿಯೋ ವೈರಲ್ ಆಗಿದ್ದು ನೋಡುವವರ ಮನ ಕಲುಕುವಂತೆ ಮಾಡಿದೆ.

ವಿಷಯ ತಿಳಿದ ತಕ್ಷಣ 12 ಅಗ್ನಿಶಾಮಕ ವಾಹನಗಳು (12 fire engines) ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದವು. ಅಪಘಾತದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಮೇಯರ್ (Mumbai Mayor) ಕಿಶೋರಿ ಪೆಡ್ನೇಕರ್ (Kishori Pednekar) ಕೂಡ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ (Mumbai Fire Brigade) ಮತ್ತು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು.