ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಆರ್ಯನ್ ಖಾನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನಿಗಾಗಿ ಆರ್ಯನ್ ಖಾನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ಅಕ್ಟೋಬರ್ 26 ರಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಿರುವಾಗಲೇ, ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಶಾರುಖ್ ಅವರ ನಿವಾಸ ‘ಮನ್ನತ್’ ಮೇಲೆ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಮಧ್ಯಾಹ್ನದ ವೇಳೆ ಆಗಮಿಸಿದ ಅಧಿಕಾರಿಗಳು ಕೈಯಲ್ಲಿ ದಾಖಲೆಗಳ ಹಿಡಿದು ಪರಿಶೀಲಿಸಿದ್ದಾರೆ ಅಲ್ಲದೆ ನಿವಾಸ ಕ್ಯಾಮೆರಾ ಕಣ್ಗಾವಲು ಆಗಿದೆ.

ಅಷ್ಟೇ ಅಲ್ಲದೆ ಬಾಲಿವುಡ್ ನಟಿ ಅನನ್ಯ ಪಾಂಡೆ ಅವರ ಮನೆ ಮೇಲೂ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ದಾಳಿ ನಡೆಸಿದೆ. ಮುಂಬೈನ ಬಾಂದ್ರಾದಲ್ಲಿರುವ ನಟಿ ಅನನ್ಯ ಪಾಂಡೆ ನಿವಾಸಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ ಎನ್‌ಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ತಮ್ಮ ಮಗನನ್ನು ನೋಡಲು ಇಂದು ಜೈಲಿಗೆ ಭೇಟಿ ನೀಡಿದ ಶಾರುಖ್ ಖಾನ್ ತಮ್ಮ ಮಗನ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅಕ್ಟೋಬರ್ 2ರಿಂದ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ರವರನ್ನು ಶಾರುಖ್ ಖಾನ್ ಅವರು ಇದೇ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ.