ತಮಿಳುನಾಡು: ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಹಳೆಯ ಸಾವಿರ ಹಾಗೂ ಐನೂರರ ನೋಟನ್ನು ಅಮಾನ್ಯೀಕರಣಗೊಳಿಸಿದ್ದು ಈಗ ಹಳೆಯ ವಿಚಾರ. ಆ ಸಂದರ್ಭ ಇಡೀ ದೇಶದ ಜನತೆ ತಮ್ಮ ಹಳೆಯ ನೋಟುಗಳನ್ನು ಬದಲಿಸಲು ಹರಸಾಹಸ ಪಟ್ಟಿದ್ದರು. ಅದೇ ರೀತಿ ಈಗ ತಮಿಳುನಾಡಿನಲ್ಲಿರುವ ಓರ್ವ ಭಿಕ್ಷುಕ ತಾನು ಜೀವಮಾನವೆಲ್ಲಾ ಉಳಿತಾಯ ಮಾಡಿದ್ದ ಹಳೆಯ ಐನೂರು ಹಾಗೂ ಸಾವಿರಗಳನ್ನೊಳಗೊಂಡ 65 ಸಾವಿರ ರೂ.ಗಳನ್ನು ಬದಲಾವಣೆ ಮಾಡಿಕೊಡಬೇಕೆಂದು ಕೋರಿದ್ದಾರೆ.

ಹೌದು, ತನ್ನ ಜೀವನವಿಡೀ ಭಿಕ್ಷೆ ಬೇಡಿ ಸಂಪಾದನೆ ಮಾಡಿರುವ ಆ 65 ಸಾವಿರಗಳನ್ನು ಬದಲಾವಣೆ ಮಾಡಿಕೊಡಬೇಕೆಂದು ತಮಿಳುನಾಡಿನ ಕೃಷ್ಣಗಿರಿ ಡಿಸಿಗೆ ಮನವಿ ಮಾಡಿದ್ದಾರೆ. ದೃಷ್ಟಿಹೀನರಾದ ಈ ವ್ಯಕ್ತಿ ಕೃಷ್ಣಗಿರಿ ಜಿಲ್ಲೆಯ ಪಾವಕ್ಕಲ್ ಪಂಚಾಯತ್ ವ್ಯಾಪ್ತಿಯ ಚಿನ್ನ ಕೌಂಟನೂರು ಗ್ರಾಮದವರು. ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿರುವ ಈ ವ್ಯಕ್ತಿ ಜೀವನಪರ್ಯಂತ ಭಿಕ್ಷೆಯಿಂದ 65 ಸಾವಿರದಷ್ಟು ಉಳಿತಾಯ ಮಾಡಿದ್ದಾರೆ. ಹಲವು ವಯೋಸಹಜ ಅನಾರೋಗ್ಯ ಸಮಸ್ಯೆಗಳಿರುವುದರಿಂದ ತಾನು ಉಳಿಸಿದ ಹಣ ಎಲ್ಲಿತ್ತೆಂಬುದನ್ನು ಮರೆತಿದ್ದರು. ಈಗ ತನ್ನ ಹಣವನ್ನು ಬದಲಾವಣೆ ಮಾಡಿಕೊಡಬೇಕೆಂದು ಡಿಸಿಗೆ ಮನವಿ ಸಲ್ಲಿಸಿದ್ದಾರೆ.