ಡ್ರಗ್ ಜಾಲದಲ್ಲಿ ಸಿಲುಕಿ ಭಾರಿ ಸುದ್ದಿಯಲ್ಲಿದ್ದ ನಟಿ ಸಂಜನಾ ಗಲ್ರಾನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆಪ್ತ ಸ್ನೇಹಿತನಿಂದಲೇ ಮೋಸಕ್ಕೊಳಗಾಗಿರುವುದಾಗಿ ನಟಿ ಸಂಜನಾ ತನ್ನ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ದೂರು ನೀಡಿದ್ದಾರೆ. ಕ್ಯಾಸಿನೋದಲ್ಲಿ ಹಣ ಹೂಡಿಕೆ ಮಾಡುವುದಾಗಿ ಸ್ನೇಹಿತ ಮೂರು ವರ್ಷದಿಂದ ನಂಬಿಸಿ ಮೋಸ ಎಸಗಿರುವುದಾಗಿ ನಟಿ ದೂರಿದ್ದಾರೆ.
ಈ ಬಗ್ಗೆ ಇಂದಿರಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ಶ್ರೀಮತಿ ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಮೂವರ ವಿರುದ್ಧವೂ ಐಪಿಸಿ ಸೆಕ್ಷನ್ 120 ಬಿ, 107, 354, 406, 420, 506ರ ಅಡಿ ಕೇಸು ದಾಖಲಿಸಲಾಗಿದೆ.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಟಿ ಸಂಜನಾ ಅವರ ಹಣವನ್ನು ಹೂಡಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. 2018ರ ನವೆಂಬರ್ ನಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೊಂಬೊದಲ್ಲಿ ಕ್ಯಾಸಿನೋಗಳ ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾಸಿನೋದಲ್ಲಿ ಬಂಡವಾಳ ಹಾಕಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಸಂಜನಾರಿಂದ ರಾಹುಲ್ ಹಣ ಪಡೆದಿದ್ದಾನೆ.