ಇತ್ತೀಚಿನ ವರದಿಯ ಪ್ರಕಾರ, ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ) ದಲ್ಲಿ ಭಾರತವು ತನ್ನ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾಗಿಂತಲೂ ಹಿಂದೆ ಉಳಿದಿದೆ.

ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್‌ಐ) 2021 ರಲ್ಲಿ ಭಾರತ 101 ನೇ ಸ್ಥಾನಕ್ಕೆ ಕುಸಿದ ನಂತರ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ, ಜಾಗತಿಕ ಹಸಿವು ಸೂಚ್ಯಂಕವನ್ನು ಲೆಕ್ಕಹಾಕಲು ವಿಶ್ವಾದ್ಯಂತ ಬಳಸುವ ವಿಧಾನ ಮತ್ತು ವಾರ್ಷಿಕ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳಿದೆ ಹಾಗಾದರೆ ಜಾಗತಿಕ ಹಸಿವು ಸೂಚ್ಯಂಕ ಎಂದರೇನು? ಅದನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದನ್ನು ಯಾವ ಮಾನದಂಡಗಳ ಮೇಲೆ ಅಳೆಯಲಾಗುತ್ತದೆ ಎಂದು ಇಂದಿನ ಈ ವಿಶೇಷ ಲೇಖನದಲ್ಲಿ ನೋಡೊಣ ಬನ್ನಿ.
ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್‌ಐ) ಎಂದರೇನು ? – ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ) ಜಾಗತಿಕವಾಗಿಯೂ, ಪ್ರಾದೇಶಿಕವಾಗಿಯೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯಲು ಮತ್ತು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಮಾರ್ಗವಾಗಿದೆ. ಹಸಿವನ್ನು ಎದುರಿಸುವಲ್ಲಿ ಪ್ರಗತಿ ಮತ್ತು ಹಿನ್ನಡೆಗಳನ್ನು ನಿರ್ಣಯಿಸಲು ಪ್ರತಿ ವರ್ಷ GHI ಅಂಕಗಳನ್ನು ಲೆಕ್ಕಹಾಕಲಾಗುತ್ತದೆ.

GHI ಅನ್ನು ಹಸಿವಿನ ವಿರುದ್ಧದ ಹೋರಾಟದ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ, ದೇಶಗಳು ಮತ್ತು ಪ್ರದೇಶಗಳ ನಡುವಿನ ಹಸಿವಿನ ಮಟ್ಟವನ್ನು ಹೋಲಿಸಲು ಒಂದು ಮಾರ್ಗವನ್ನು ಒದಗಿಸುತ್ತದೆ, ಮತ್ತು ವಿಶ್ವದ ಹಸಿವು ಮಟ್ಟಗಳು ಹೆಚ್ಚಿರುವ ಪ್ರದೇಶಗಳತ್ತ ಗಮನಹರಿಸಲು ಮತ್ತು ಹೆಚ್ಚುವರಿ ಪ್ರಯತ್ನಗಳ ಅಗತ್ಯತೆಗಾಗಿ ಹಸಿವನ್ನು ಹೋಗಲಾಡಿಸುವುದು ಇದರ ಧ್ಯೇಯವಾಗಿದೆ. ಜಾಗತಿಕ ಮಟ್ಟದಲ್ಲಿ ಹಸಿವನ್ನು ಅಳೆಯುವುದು ಬಹಳ ಕ್ಲಿಷ್ಟಕರವಾಗಿದೆ. GHI ಅಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು ಅವು ನಮಗೆ ಏನನ್ನು ಸೂಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಸಹಾಯ ಮಾಡುತ್ತದೆ.
GHI ಅಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? – GHI ಸ್ಕೋರ್‌ಗಳನ್ನು ಮೂರು ಹಂತದ ಪ್ರಕ್ರಿಯೆಯನ್ನು ಬಳಸಿ ಲೆಕ್ಕಹಾಕಲಾಗುತ್ತದೆ, ಇದು ಹಸಿವಿನ ಬಹು ಆಯಾಮದ ಸ್ವಭಾವವನ್ನು ಸೆರೆಹಿಡಿಯಲು ವಿವಿಧ ಮೂಲಗಳಿಂದ ಲಭ್ಯವಿರುವ ಡೇಟಾವನ್ನು ಪಡೆಯುತ್ತದೆ.

ಮೊದಲಿಗೆ, ಪ್ರತಿ ದೇಶಕ್ಕೆ, ನಾಲ್ಕು ಸೂಚಕಗಳಿಗೆ ಮೌಲ್ಯಗಳನ್ನು ನಿರ್ಧರಿಸಲಾಗುತ್ತದೆ, (1) ಅಂಡರ್ ನರೀಶ್‌ಮೆಂಟ್ – ಪೌಷ್ಟಿಕಾಂಶ ಆಹಾರ ಸಿಗದೇ ಇರುವ ಜನಸಂಖ್ಯೆ. (2) ಚೈಲ್ಡ್ ವೇಸ್ಟಿಂಗ್ – ಅಪೌಷ್ಟಿಕತೆಯಿಂದ ಬಳಲುವ ಐದು ವರ್ಷದೊಳಗಿನ ಮಕ್ಕಳು. ಅಂದರೆ, ಅವರ ಎತ್ತರಕ್ಕೆ ತಕ್ಕ ಇರಬೇಕಾದ ತೂಕಕ್ಕಿಂತ ಕಡಿಮೆ ತೂಕ ಹೊಂದಿರುವ ಹಾಗೂ ತೀವ್ರ ಅಪೌಷ್ಟಿಕತೆಯ ಹೊಂದಿರುವ ಮಕ್ಕಳು. (3) ಚೈಲ್ಡ್ ಸ್ಟಂಟಿಂಗ್ – ಬೆಳವಣಿಗೆ ಕುಂಠಿತಗೊಂಡ ಐದು ವರ್ಷದೊಳಗಿನ ಮಕ್ಕಳು. ಅಂದರೆ, ತಮ್ಮ ವಯಸ್ಸಿಗೆ ಕಡಿಮೆ ಎತ್ತರವನ್ನು ಹೊಂದಿರುವ, ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು. (4) ಚೈಲ್ಡ್ ಮೊರ್ಟಾಲಿಟಿ – ಅಸಮರ್ಪಕ ಪೋಷಣೆ ಹಾಗೂ ಅನಾರೋಗ್ಯಕರ ವ್ಯವಸ್ಥೆಯಿಂದ ಮರಣ ಹೊಂದಿದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ.

ಎರಡನೆಯದಾಗಿ, ಇತ್ತೀಚಿನ ನಾಲ್ಕು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನಿಸಿದ ಮಟ್ಟವನ್ನು ಆಧರಿಸಿ ಪ್ರತಿ ನಾಲ್ಕು ಅಂಶಗಳ ಸೂಚಕಗಳಿಗೆ 100-ಪಾಯಿಂಟ್ ಸ್ಕೇಲ್‌ನಲ್ಲಿ ಪ್ರಮಾಣಿತ ಸ್ಕೋರ್ ನೀಡಲಾಗಿದೆ.

ಮೂರನೆಯದಾಗಿ, ಪ್ರತಿ ದೇಶಕ್ಕೆ GHI ಸ್ಕೋರ್ ಅನ್ನು ಲೆಕ್ಕಹಾಕಲು ಅಸಮರ್ಪಕ ಆಹಾರ ಪೂರೈಕೆ, ಮಕ್ಕಳ ಮರಣ ಮತ್ತು ಮಕ್ಕಳ ಅಪೌಷ್ಟಿಕತೆ ಈ ಮೂರು ಆಯಾಮಗಳೊಂದಿಗೆ ಪ್ರಮಾಣಿತ ಅಂಕಗಳನ್ನು ಒಟ್ಟುಗೂಡಿಸಲಾಗುತ್ತದೆ.