ದೆಹಲಿ : ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪ್ರತಿಭಟನೆಯ ಕೇಂದ್ರವಾಗಿರುವ ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಇಂದು(ಅ.15) ಬೆಳಗಿನ ಜಾವ, ಕೈಕಾಲು ತುಂಡರಿಸಲ್ಪಟ್ಟ ಯುವಕನೊಬ್ಬನ ಶವವು ಪೊಲೀಸ್ ಬ್ಯಾರಿಕೇಡಿಗೆ ನೇತು ಹಾಕಿದ ಸ್ಥಿತಿಯಲ್ಲಿ ಸಿಕ್ಕಿದೆ.
ರೈತರ ಪ್ರತಿಭಟನೆಯ ಮುಖ್ಯ ವೇದಿಕೆಗೆ ಸ್ವಲ್ಪ ದೂರದಲ್ಲೇ ರಕ್ತದ ಮಡುವಿನಲ್ಲಿ ಈ ಶವ ಸಿಕ್ಕಿರುವುದು ಉದ್ರಿಕ್ತ ವಾತಾವರಣ ಉಂಟುಮಾಡಿದೆ. ಈ ಕ್ರೌರ್ಯಯುತ ಕೊಲೆಗೆ ‘ನಿಹಾಂಗ್’ ಎಂಬ ಸಿಖ್ ಯೋಧರ ಗುಂಪು ಕಾರಣವಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಘಟನಾ ಸ್ಥಳದಲ್ಲಿ ಹರಿಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸುಮಾರು 35 ವರ್ಷ ವಯಸ್ಸಿನ ಈ ಕೊಲೆಯಾದ ವ್ಯಕ್ತಿ ಯಾರು ಎಂದು ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಮೊದಮೊದಲು ಪೊಲೀಸರು ಘಟನಾ ಸ್ಥಳಕ್ಕೆ ಪ್ರವೇಶಿಸಲು ಪ್ರತಿಭಟನಾನಿರತ ರೈತರು ಅಡ್ಡಿಪಡಿಸಿದರೂ, ತದನಂತರ ಸ್ಥಳ ಪರಿಶೀಲನೆಗೆ ಅವಕಾಶ ನೀಡಿದರು. ಶವವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು ಎಂದು ವರದಿಗಳು ತಿಳಿಸಿವೆ.
ಈ ಸ್ಥಳದಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರಕರಣಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹರಿಯಾಣ ಸರ್ಕಾರದೊಂದಿಗೆ ಪೂರ್ಣ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿದೆ. ‘ನಿಹಾಂಗರು ಈ ಪ್ರಕರಣದ ಹಿಂದಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ನಿಹಾಂಗರು ನಮಗೆ ಮೊದಲಿನಿಂದ ತೊಂದರೆ ಮಾಡುತ್ತಲೇ ಬಂದಿದ್ದಾರೆ’ ಎಂದು ಕಿಸಾನ್ ಮೋರ್ಚಾದ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಕುತೂಹಲ ಮೂಡಿಸಿದ ಸಿಎಂ ಹಾಗೂ ಮಾಜಿ ಸಿಎಂ – ಉಪ ಚುನಾವಣೆ ಅಖಾಡಕ್ಕೆ ಮಾಜಿ ಸಿಎಂ ಬಿಎಸ್‌ವೈ
ಕೃಷಿಕಾನೂನುಗಳ ವಿರುದ್ಧ ಪ್ರತಿಭಟನೆಗಾಗಿ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ರೈತ ಮುಖಂಡರು ಗುಂಪುಗಟ್ಟಿರುವುದು ಎಷ್ಟು ಸರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಬೆನ್ನಲ್ಲೇ ಈ ಹಿಂಸಾತ್ಮಕ ಘಟನೆ ನಡೆದಿದೆ. ಈ ಘಟನೆಯಿಂದ, ಕಳೆದ ಜನವರಿಯಲ್ಲಿ ರೈತಪ್ರತಿಭಟನೆಯ ಹೆಸರಲ್ಲಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಹಿಂಸಾಚಾರದ ನೆನಪುಗಳು ಮರುಕಳಿಸಿವೆ.