ಬೆಂಗಳೂರು : ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ನಟ,ವಿಲನ್ ಪಾತ್ರದ ಮೂಲಕ ಮಿಂಚಿದ್ದ ಹಿರಿಯ ಕಲಾವಿದ ಸತ್ಯಜಿತ್ ಅವರು ವಯೋಸಹಜ ಅನಾರೋಗ್ಯದಿಂದ ರಾತ್ರಿ 2 ಗಂಟೆಗೆ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದ ಕಾರಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸತ್ಯಜಿತ್ ಅವರು ಕೆಲ ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ 72 ವರ್ಷದ ಹಿರಿಯ ನಟ ಅಸುನೀಗಿದ್ದಾರೆ

600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ: ಸತ್ಯಜಿತ್ ಅವರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಗಡಸು ಧ್ವನಿ, ವಿಶಿಷ್ಟ ಉತ್ತರ ಕರ್ನಾಟಕದ ಕನ್ನಡ ಭಾಷೆ, ಅಜಾನುಬಾಹು ಆಗಿದ್ದ ಅವರು ತಮ್ಮ ಖಡಕ್ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಡಾ. ರಾಜ್, ವಿಷ್ಣುವರ್ಧನ್ ಅಲ್ಲದೇ ಹಲವು ನಟರ ಜೊತೆ ಅವರು ತೆರೆಯನ್ನು ಹಂಚಿಕೊಂಡಿದ್ದಾರೆ. ವಿಲನ್ ಪಾತ್ರದ ಜೊತೆಗೆ ಅವರು ಗಂಭೀರ, ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಚಾಲಕ ವೃತ್ತಿಯಿಂದ ನಟನೆಯ ಕಡೆಗೆ: ವೃತ್ತಿಯಲ್ಲಿ ಬಸ್ ಚಾಲಕ ಆಗಿದ್ದ ಸತ್ಯಜಿತ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆ ಬಳಿಕ ಸಿನಿಮಾಗಳಲ್ಲೂ ನಟಿಸಲು ಆರಂಭಿಸಿದರು. ಸಯ್ಯದ್ ನಿಜಾಮುದ್ದೀನ್ ಹೆಸರಿನ ಅವರು ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಬಳಿಕ ತಮ್ಮ ಹೆಸರನ್ನು ಸತ್ಯಜಿತ್ ಎಂದು ಬದಲಿಸಿಕೊಂಡರು.
ನಾನಾ ಪಾಟೇಕರ್ ಅವರು ನಾಯಕನಟರಾಗಿ ಅಭಿನಯಿಸಿದ್ದ ‘ಅಂಕುಶ್’ ಹಿಂದಿ ಸಿನಿಮಾ ಮೂಲಕ ಅವರು ಸಿನಿಮಾಕ್ಕೆ ಕಾಲಿಟ್ಟರು. ಅಂಕುಶ್ ಸಿನಿಮಾದ ಟೈಟಲ್ ಕಾರ್ಡ್‌ನಲ್ಲೇ ‘ಸತ್ಯಜಿತ್’ ಎಂದು ಕರೆಯಲಾಯಿತು. ಮುಂದೆ ಅವರು ತಮ್ಮ ಹೆಸರನ್ನು ಸತ್ಯಜಿತ್ ಎಂದು ಬದಲಿಸಿಕೊಂಡರು.
ಸತ್ಯಜಿತ್ ಪುಟ್ನಂಜ, ಶಿವ ಮೆಚ್ಚಿದ ಕಣ್ಣಪ್ಪ, ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ಗಮನ ಸೆಳೆದರು. 2004ರಲ್ಲಿ ತೆರೆಕಂಡ ವಿಷ್ಣುವರ್ಧನ್ ನಾಯಕತ್ವದ ‘ಆಪ್ತಮಿತ್ರ’ ಅವರಿಗೆ ಸಾಕಷ್ಟು ಹೆಸರು ತಂದಿತು.
‘ಅಂತಿಮ ತೀರ್ಪು’, ‘ನಮ್ಮೂರ ರಾಜ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ನೊಂದ ಹಿರಿಯ ಜೀವ: ಕಳೆದ ಕೆಲ ವರ್ಷಗಳು ವೈಯಕ್ತಿಕವಾಗಿ ಸತ್ಯಜಿತ್ ಅವರಿಗೆ ಹರ್ಷದಾಯಕ ಆಗಿರಲಿಲ್ಲ. ಅನಾರೋಗ್ಯ, ಕೌಟುಂಬಿಕ ಸಮಸ್ಯೆಯನ್ನು ಅವರು ಎದುರಿಸಿದರು. ಕೆಲ ವರ್ಷದ ಹಿಂದೆ ಗ್ಯಾಂಗ್ರೀನ್ ಬಂದು ಅವರ ಒಂದು ಕಾಲು ಕತ್ತರಿಸಲಾಯಿತು. ವರ್ಷದ ಹಿಂದೆ ಆಸ್ತಿ ಕೋರಿ ಮಗಳು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಕೆಲ ವರ್ಷದಿಂದ ಆರ್ಥಿಕ ಸಮಸ್ಯೆಗೂ ಸತ್ಯಜಿತ್ ಒಳಗಾಗಿದ್ದರು.
ಹಿರಿಯ ನಟ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಹೆಗಡೆನಗರದಲ್ಲಿರುವ ಸತ್ಯಜಿತ್ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅವರ ಅಂತಿಮಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.