ಮೈಸೂರು ದಸರಾದಲ್ಲಿ ಗಜಪಡೆಯ ಪಾತ್ರ ಬಹಳ ಮಹತ್ವದ್ದು. ಜಂಬೂಸವಾರಿಗೆ ಒಂದು ತಿಂಗಳಿರುವಾಗಲೇ ಆನೆಗಳು ಮೈಸೂರಿಗೆ ಬಂದು ನಾಡಹಬ್ಬದ ಮೆರಗು ಹೆಚ್ಚಿಸಲು ತಾಲೀಮು ಆರಂಭಿಸುತ್ತವೆ. ಸುಮಾರು 750 ಕೆ.ಜಿ ತೂಕದ ಅಂಬಾರಿಯನ್ನು ಈ ಬಾರಿ ಹೊರುವ ಜವಾಬ್ದಾರಿ ʻಅಭಿಮನ್ಯುʼ ಎಂಬ ಆನೆಯದ್ದು. ಬಲಿಷ್ಠವಾದ ದೇಹ ಹಾಗೂ ಗಂಭೀರ ಸ್ವಭಾವದ ಅಭಿಮನ್ಯು ಹಿನ್ನೆಲೆ ಕುರಿತ ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ.
4,720 ಕೆ.ಜಿ. ತೂಕ:

ಸಾಮಾನ್ಯವಾಗಿ ಆನೆಗಳು 4,000 ಕೆ.ಜಿ.ಯಿಂದ 4,400 ಕೆ.ಜಿ. ತನಕ ತೂಕವಿದ್ದರೆ, 56 ವರ್ಷದ ಅಭಿಮನ್ಯು ಭರ್ಜರಿ 4,720 ಕೆ.ಜಿ ತೂಕವಿದೆ. ಇದರದ್ದು 2.72 ಮೀಟರ್ ಎತ್ತರ ಹಾಗೂ 3.51 ಮೀಟರ್ ಉದ್ದದ ಬೃಹತ್ ದೇಹ. ನಾಗರಹೊಳೆ ಸಮೀಪದ ಮತ್ತಿಗೋಡು ಆನೆ ಶಿಬಿರವು ಇದರ ಖಾಯಂ ವಾಸಸ್ಥಳ. ಮಾವುತರಾದ ವಸಂತ್ ಹಾಗೂ ಕಾವಾಡಿಯಾದ ರಾಜುರವರು ಇದರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ.
ಸಾಕಾನೆಯಾಗಿ 41 ವರ್ಷ:

ಸುಮಾರು 16 ವರ್ಷ ವಯಸ್ಸಿನ ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯದಲ್ಲಿ ಸೆರೆಹಿಡಿಯಲಾಯಿತು. ಬಹಳ ಚುರುಕು ಸ್ವಭಾವವನ್ನು ಗಮನಿಸಿ ಮಹಾಭಾರತದ ಅಭಿಮನ್ಯು ಹೆಸರನ್ನು ಇದಕ್ಕೆ ಇಡಲಾಯಿತು. ಸುಮಾರು 41 ವರ್ಷದಿಂದ ಮಾವುತರ ಒಡನಾಟದೊಂದಿಗೆ ಬೆಳೆಯುತ್ತಿದೆ.
ಕಾಡಾನೆ, ಹುಲಿ ಹಿಡಿಯುವುದರಲ್ಲಿ ನಿಸ್ಸೀಮ:

ಜಮೀನು ಹಾಗೂ ಊರಿಗೆ ಬಂದ ಕಾಡಾನೆ, ಹುಲಿಗಳನ್ನು ಸೆರೆಹಿಡಿಯಲು ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅಭಿಮನ್ಯು ಈವರೆಗೆ ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಒಟ್ಟು 140ಕ್ಕೂ ಹೆಚ್ಚು ಕಾಡಾನೆಗಳನ್ನು ಹಾಗೂ 50ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಿದ ಕೀರ್ತಿ ಹೊಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಡಾನೆ ಹಾಗೂ ಹುಲಿಗಳನ್ನು ಹಿಡಿದ ಏಕೈಕ ಆನೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಕಾಡಾನೆಗಳನ್ನು ಸೆರೆ ಹಿಡಿಯಲು ಅವುಗಳಿಗೆ ಹೇಗೆ ಸನ್ನೆ ನೀಡಬೇಕೆಂಬ ಚಾಣಾಕ್ಷತನವು ಅಭಿಮನ್ಯುಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಇದನ್ನು “ಆಪರೇಷನ್ ಹೀರೋ” ಎಂಬ ಬಿರುದಿನಿಂದ ಕರೆಯಲಾಗುತ್ತದೆ.
13ನೇ ದಸರಾ, 2ನೇ ಸಲ ಅಂಬಾರಿ:

ಕಳೆದ 12 ವರ್ಷಗಳಿಂದ ಮೈಸೂರಿನ ದಸರಾದಲ್ಲಿ ಅಭಿಮನ್ಯು ಭಾಗವಹಿಸುತ್ತಿದೆ. 2015ರ ತನಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವುದು ಅಭಿಮನ್ಯು ಜವಾಬ್ದಾರಿಯಾಗಿತ್ತು. ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. 2020ರಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಅಭಿಮನ್ಯು ಮೇಲೆ ಹೊರಿಸಲಾಯಿತು. ಶ್ರೀರಂಗಪಟ್ಟಣದ ದಸರಾದಲ್ಲಿ ಮರದ ಅಂಬಾರಿಯನ್ನು 7 ವರ್ಷ ಹೊತ್ತಿರುವ ಅನುಭವವನ್ನೂ ಇದು ಹೊಂದಿದೆ.
ಶಬ್ದಕ್ಕೆ ಹೆದರಲ್ಲ:

ಅಭಿಮನ್ಯುವಿನ ವಿಶೇಷ ಗುಣವೆಂದರೆ, ಇದು ಯಾವುದೇ ಶಬ್ದಕ್ಕೆ ಸ್ವಲ್ಪವೂ ಅಂಜುವುದಿಲ್ಲ. ಅಂಬಾರಿ ಹೊರಲು ಆಯ್ಕೆಯಾಗಿರುವುದಕ್ಕೆ ಇದೇ ಪ್ರಮುಖ ಕಾರಣ. ಮೊನ್ನೆ ನಡೆದ ಫಿರಂಗಿ ಶಬ್ದದ ಪರೀಕ್ಷೆ ವೇಳೆ ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಗಲಿಬಿಲಿಗೊಂಡರೂ, ಅಭಿಮನ್ಯು ಮಾತ್ರ ಸ್ವಲ್ಪವೂ ವಿಚಲಿತನಾಗಲಿಲ್ಲ. ಏನೂ ಆಗಿಲ್ಲ ಎನ್ನುವಂತೆ ತನ್ನ ಕರ್ತವ್ಯದಲ್ಲಿ ಅದು ಮಗ್ನವಾಗಿತ್ತು.
ಹೀಗಿರುತ್ತದೆ ಅಭಿಮನ್ಯು ದಿನಚರಿ:

ಅಭಿಮನ್ಯು ಮಾವುತರಾದ ವಸಂತ್‌ರವರು ಹೇಳುವ ಪ್ರಕಾರ, ಬಿಡಾರದಲ್ಲಿರುವ ಬೇರೆಲ್ಲ ಆನೆಗಳಿಗಿಂತ ಅಭಿಮನ್ಯು ಹೆಚ್ಚು ಸಕ್ರಿಯವಾಗಿರುತ್ತದೆ. ಸೊಪ್ಪು, ಕಬ್ಬು, ತೆಂಗಿನ ಕಾಯಿ ಮತ್ತು ಬೆಲ್ಲವು ಇದರ ಇಷ್ಟದ ಆಹಾರಗಳು. ಮಾವುತರ ಭಾವನೆಯನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುವುದರಿಂದ ಅಭಿಮನ್ಯುವಿನ ನಿರ್ವಹಣೆ ಹೆಚ್ಚೇನೂ ಕಷ್ಟವಲ್ಲವಂತೆ.