ಲಂಡನ್ : ಆರನೇ ವಯಸ್ಸಿನಲ್ಲಿ ಅಬ್ಬಬ್ಬಾ ಅಂದರೆ ಏನು ಮಾಡಬಹುದು? ಊಹಿಸಿನೋಡಿ. ಮೊದಲನೇ ತರಗತಿ ಅಥವಾ ಎರಡನೇ ತರಗತಿಯಲ್ಲಿ ಓದುತ್ತಿರುವ ಮಗು ಸಾಮಾನ್ಯವಾಗಿ ಮನೆಯಲ್ಲಿ ಆಟಿಕೆಗಳನ್ನು ನೋಡುತ್ತಾ ಆಟವಾಡುತ್ತಾ ಸಮಯ ಕಳೆಯಬಹುದು.

ಆದರೆ ಭಾರತೀಯ ಹುಡುಗಿ ಎಲಿಶಾ ಗಾಧಿಯಾ ತನ್ನ ಆರನೇ ವಯಸ್ಸಿನಲ್ಲಿ ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸುತ್ತ ಇಷ್ಟು ಚಿಕ್ಕ ವಯಸ್ಸಿನಲ್ಲಿ, ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಂದ ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಜಾಗೃತಿ ಮತ್ತು ಪ್ರಚಾರಕ್ಕಾಗಿ ‘ಡೈಲಿ ಪಾಯಿಂಟ್ಸ್ ಆಫ್ ಲೈಟ್’ ಪ್ರಶಸ್ತಿಯನ್ನು ಪಡೆದರು. ಈ ಪುಟ್ಟ ವಯಸ್ಸಿನಲ್ಲಿಯೇ ಇಂತಹ ದೊಡ್ಡ ದೊಡ್ಡ ಕಾರ್ಯಕ್ರಮ ನಡೆಸಿಕೊಡುತ್ತಿರುವ ಈ ಪೋರಿ ಯುಕೆಯಲ್ಲಿ ‘ಕೂಲ್ ಅರ್ಥ್’ ಎಂಬ ಚಾರಿಟಿಗೆ ಮಿನಿ ಅಂಬಾಸಿಡರ್ ಆಗಿದ್ದಾರೆ. ತನ್ನ ಅಭಿಯಾನದ ಮೂಲಕ ಎಲಿಶಾ ಇಲ್ಲಿಯವರೆಗೆ NGO ಗಾಗಿ 3000 ಪೌಂಡ್ಸ್‌ನಷ್ಟು ಹಣವನ್ನ ಸಂಗ್ರಹಿಸಿದ್ದಾರೆ.

ಹವಾಮಾನ ಬದಲಾವಣೆಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಎಲಿಶಾ ತನ್ನ ಶಾಲೆಯಲ್ಲಿ ವಿಶೇಷ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ. ಈ ಕ್ಲಬ್‌ನ ಮಕ್ಕಳು ಮತ್ತು ಅವರ ಪೋಷಕರು ಪರಿಸರದ ಬಗ್ಗೆ ಕಾಳಜಿ ವಹಿಸಲು ಮತ್ತು ಗಿಡಗಳನ್ನು ನೆಡಲು ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ : ಅಂಬಾನಿ 100 ಬಿಲಿಯನ್ ಡಾಲರ್ ಗಣ್ಯರ ಕ್ಲಬ್ ಸೇರಿದ ಮೊದಲ ಏಷ್ಯನ್
‘ಡೈಲಿ ಪಾಯಿಂಟ್ಸ್ ಆಫ್ ಲೈಟ್’ ಪ್ರಶಸ್ತಿ ಸ್ವೀಕರಿಸಲು ಮತ್ತು ಈ ಕುರಿತು ಬ್ರಿಟಿಷ್ ಪ್ರಧಾನ ಮಂತ್ರಿ ಪತ್ರ ಬರೆದಾಗ ಅತೀಯಾದ ಸಂತೋಷವಾಗಿದೆ ಎಂದಿದ್ದಾಳೆ. ಪ್ರಧಾನಿಗೆ ಎಲಿಷಾ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾಳೆ. ತಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದಳು.