ಜಗತ್ತು ಎಷ್ಟೇ ಮುಂದುವರೆದರೂ ನಾವು ಅಂಚೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂದಿನ ಈ ಡಿಜಿಟಲ್ ಯುಗದಲ್ಲಿ ಪೋಸ್ಟಲ್ ಕೋಡ್ ಮಹತ್ವವೇನೂ ಕಡಿಮೆಯಾಗಿಲ್ಲ ಪ್ರತಿಯಾಗಿ ಪಿನ್‌ಕೋಡ್‌ನ ಅವಶ್ಯಕತೆ ಹೆಚ್ಚಾಗಿದೆ. ಪಿನ್ ಕೋಡ್ ಸಂಖ್ಯೆಯು ಇಂದು ಫುಡ್ ಡೆಲಿವರಿ ಅಪ್ಲಿಕೇಶನ್‌ಗಳಿಂದ ಹಿಡಿದು ಆನ್‌ಲೈನ್ ಮಾರಾಟದ ವೇದಿಕೆಯ ಪ್ರತಿಯೊಂದು ಅಪ್ಲಿಕೇಶನ್ ಗಳಿಗೆ ಬಹಳ ಪ್ರಧಾನವಾಗಿ ಬೇಕಾಗಿರುವ ಒಂದು ಅಂಶವಾಗಿದೆ. ಅಂಚೆ ಸೂಚ್ಯಂಕ ಕೋಡ್ ಅಥವಾ ಪಿನ್ ಕೋಡ್ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನ ತಿಳಿಯೋಣ ಬನ್ನಿ.

ನಮ್ಮ ದೇಶದಲ್ಲಿ ಪೋಸ್ಟಲ್ ಇಂಡೆಕ್ಸ್ ಸಂಖ್ಯೆ (ಪೋಸ್ಟಲ್ ಇಂಡೆಕ್ಸ್ ನಂಬರ್) ಅನ್ನು ಪಿನ್ ಅಥವಾ ಪಿನ್ ಕೋಡ್ ಎಂತಲೂ ಕರೆಯಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಷ್ಟು ದೊಡ್ಡ ದೇಶವನ್ನು ಕೇವಲ ಆರು ಅಂಕಿಗಳ ಡಿಜಿಟಲ್ ಕೋಡ್‌ನಿಂದ ವಿಭಜಿಸುವುದು ಮತ್ತು ಇತರ ದೇಶಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದು ಸಾಮಾನ್ಯವೇನಲ್ಲ. ನಮ್ಮ ದೇಶವನ್ನು ಒಟ್ಟು 8 ಅಂಚೆ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಪಿನ್ ಕೋಡ್ ನಲ್ಲಿರುವ ಮೊದಲ ಅಂಕಿಯು ಇವುಗಳನ್ನು ಸೂಚಿಸುತ್ತದೆ.

ವಿಶ್ವ ಸಮರಗಳ ಸಮಯದಲ್ಲಿ ಉತ್ತಮ ಸಂವಹನ ವ್ಯವಸ್ಥೆ ಅನಿವಾರ್ಯವಾಗಿದ್ದರಿಂದ ಯುರೋಪ್ ಮತ್ತು ಅಮೇರಿಕಾಗಳು ಪಿನ್ ಕೋಡ್ ಅಥವಾ ಜಿಪ್ ಕೋಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವು. ಆದರೆ ಭಾರತದಲ್ಲಿ ಸ್ವತಂತ್ರ ಬಂದ ನಂತರ 1972 ರಲ್ಲಿ (ಆಗಸ್ಟ್ 15) ಜಿಪ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು.

ಭಾರತವನ್ನು ಒಟ್ಟು 9 ಅಂಚೆ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಒಂಬತ್ತನೇ ಸಂಖ್ಯೆಯನ್ನು ಕೇವಲ ಸೇನೆಗೆ ನಿಯೋಜಿಸಲಾಗಿರುವುದರಿಂದ, ಉಳಿದ ಎಂಟು ಪ್ರದೇಶಗಳನ್ನು ಮಾತ್ರ ಜನಸಾಮಾನ್ಯರ ವ್ಯವಹಾರ ಮತ್ತು ವಹಿವಾಟುಗಳಲ್ಲಿ ಪರಿಗಣಿಸಲಾಗುತ್ತದೆ. ಆಯಾ ಅಂಚೆ ಕಚೇರಿಗಳಿಗೆ ವಿಶಿಷ್ಟ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಭಾರತೀಯ ಪಿನ್ ಕೋಡ್‌ನಲ್ಲಿರುವ ಆರು ಅಂಕೆಗಳಲ್ಲಿ, ಮೊದಲ ಅಂಕಿಯು ಅಂಚೆ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಎರಡನೇ ಅಂಕಿಯು ಉಪ-ಪ್ರದೇಶ ಅಥವಾ ಉಪ-ಉಪವಿಭಾಗವನ್ನು ಪ್ರತಿನಿಧಿಸುತ್ತದೆ, ಮೂರನೆಯ ಅಂಕಿ ಜಿಲ್ಲೆ ಮತ್ತು ಕೊನೆಯ ಮೂರು ಅಂಕಿಗಳು ಹತ್ತಿರದ ಅಂಚೆ ಕಛೇರಿಯನ್ನು ಪ್ರತಿನಿಧಿಸುತ್ತದೆ.

ಅಂಚೆ ಪ್ರದೇಶಗಳು -ರಾಜ್ಯಗಳು ಹೀಗಿವೆ:
1 – ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಚಂಡೀಗಡ್
2 – ಉತ್ತರ ಪ್ರದೇಶ ಹಾಗೂ ಉತ್ತರಾಖಂಡ,
3 – ರಾಜಸ್ಥಾನ, ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ,
4 – ಛತ್ತೀಸ್‌ಗಡ್ , ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಗೋವಾ,
5 – ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಯಾನಂ (ಪುದುಚೇರಿ ಜಿಲ್ಲೆ),
6 – ಕೇರಳ, ತಮಿಳುನಾಡು, ಪುದುಚೇರಿ (ಯಾನಂ ಹೊರತುಪಡಿಸಿ) ಹಾಗೂ ಲಕ್ಷದ್ವೀಪ,
7 – ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು,
8 – ಬಿಹಾರ, ಜಾರ್ಖಂಡ್.
9 – ನೇ ಪ್ರದೇಶವು ಸೇನೆಯದ್ದಾಗಿದೆ. ಇದನ್ನು ಆರ್ಮಿ ಪೋಸ್ಟ್ ಆಫೀಸ್ (APO) ಅಥವಾ ಫೀಲ್ಡ್ ಪೋಸ್ಟ್ ಆಫೀಸ್ (FPO) ಎಂತಲೂ ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಪ್ರಸ್ತುತ 19,101 ಪಿನ್ ಕೋಡ್ ಗಳಿದ್ದು ಸುಮಾರು 1,54,725 ಅಂಚೆ ಕಚೇರಿಗಳನ್ನು ಇವೆ.