ಮೈಸೂರು : ಪ್ರತಿವರ್ಷ ನವರಾತ್ರಿ ಸಮಯದಲ್ಲಿ ರಾಜ್ಯದ ಹಂಪಿ, ಕೊಡಗು, ಮಂಗಳೂರು, ಶಿವಮೊಗ್ಗ, ದಾಂಡೇಲಿ ಸೇರಿದಂತೆ ಹಲವು ಕಡೆಗಳಲ್ಲಿ ನಾಡಹಬ್ಬ ದಸರಾ ಆಚರಿಸಲಾಗುತ್ತದೆ. ವಿಜಯ ದಶಮಿಯ ದಿನದಂದು ವಿಶೇಷ ರೀತಿಯಲ್ಲಿ ಮೆರವಣಿಗೆ ಸಾಗುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇರೆಲ್ಲ ಊರುಗಳಿಗಿಂತ ಹೆಚ್ಚು ವಿಜೃಂಭಣೆ, ಸಂಭ್ರಮದಿಂದ ದಸರಾ ಜರಗುತ್ತದೆ. ಇಲ್ಲಿನ ದಸರಾವನ್ನು ಕಣ್ತುಂಬಿಸಿಕೊಳ್ಳಲು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯ ಹಾಗೂ ಹೊರದೇಶದ ಜನರು ಕೂಡ ಹವಣಿಸುತ್ತಾರೆ. ಇವೆಲ್ಲ ಎಲ್ಲರಿಗೂ ತಿಳಿದಿರುವ ವಿಷಯಗಳು. ಆದರೆ ಮೈಸೂರಿನ ದಸರಾ ಇತಿಹಾಸ, ಮಹತ್ವದ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳಿವೆ. ಈ ಬಗ್ಗೆ ತಿಳಿಯೋಣ ಬನ್ನಿ.

ನಾಲ್ಕು ಶತಮಾನಗಳ ಇತಿಹಾಸ! ಮೈಸೂರಿನ ಮಹಾರಾಜರಾಗಿದ್ದ ಒಂದನೇ ರಾಜಾ ಒಡೆಯರ್‌ರವರು 1610ನೇ ಇಸವಿಯಲ್ಲಿ ದಸರಾ ಆರಂಭಿಸಿದರು. ಈ ಪ್ರಕಾರ ಈಗ ಮೈಸೂರಿನಲ್ಲಿ ನಡೆಯುತ್ತಿರುವುದು 412ನೇ ದಸರಾ ಉತ್ಸವ. ಆದರೆ, ಒಡೆಯರ್ ಆಳ್ವಿಕೆಗೂ ಮೊದಲು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲೇ ದಸರಾ ಆಚರಿಸಲಾಗುತ್ತಿತ್ತು, ಕಾಲಕ್ರಮೇಣ ನಿಂತು ಹೋಗಿದ್ದ ಪದ್ಧತಿಯನ್ನು ಒಂದನೇ ರಾಜಾ ಒಡೆಯರ್ ಪುನರಾರಂಭಿಸಿದರು ಎಂಬ ವಾದವೂ ಇದೆ.

ದೇವಿ ಭಾಗವತದಲ್ಲಿ ದಸರಾ ಹಿನ್ನೆಲೆ! ಪುರಾಣ ಗ್ರಂಥವಾದ ದೇವಿ ಭಾಗವತದಲ್ಲಿ ಮಹಿಷಾಸುರನ ವಧೆ ಬಗ್ಗೆ ಉಲ್ಲೇಖವಿದೆ. ಕೋಣನ ತಲೆಯುಳ್ಳ ಮಹಿಷಾಸುರನು ನಗರವನ್ನು ಆಳುತ್ತಿದ್ದನು. ಬ್ರಹ್ಮನ ವರ ಪಡೆದು, ತನಗೆ ಸಾವಿಲ್ಲವೆಂದು ಮೆರೆಯುತ್ತಿದ್ದ ಆತನನ್ನು ಪಾರ್ವತಿಯು ಚಾಮುಂಡೇಶ್ವರಿಯಾಗಿ ಬಂದು ಸಂಹರಿಸಿದಳು ಎಂಬ ಪೌರಾಣಿಕ ಪ್ರತೀತಿ ಇದೆ. ಮಹಿಷಾಸುರನು ಆಳುತ್ತಿದ್ದ ನಗರವಾಗಿದ್ದರಿಂದ ಮೈಸೂರು ಎಂಬ ಹೆಸರು ಬಂದಿದೆ.

ಶ್ರೀರಂಗಪಟ್ಟಣದಿಂದ ಟ್ರ್ಯಾನ್ಸ್‌ಫರ್! ಪ್ರಸ್ತುತ ಮೈಸೂರಿನಲ್ಲಿ ದಸರಾವನ್ನು ಆಚರಿಸಲಾಗುತ್ತಿದೆಯಾದರೂ, ಇದು ಆರಂಭವಾಗಿದ್ದು ಮಾತ್ರ ಸಮೀಪದ ಶ್ರೀರಂಗಪಟ್ಟಣದಲ್ಲಿ. 1800ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿದ ನಂತರವಷ್ಟೇ ಮೈಸೂರಿನಲ್ಲಿ ದಸರಾ ಆಚರಿಸಲಾಗುತ್ತಿದೆ.

ಮಡಿಕೇರಿಯಲ್ಲೂ ನಡೆಯುತ್ತಿತ್ತು ವೈಭವದ ದಸರಾ! ಒಂದಾನೊಂದು ಕಾಲದಲ್ಲಿ ಮಡಿಕೇರಿಯಲ್ಲಿ ಕೂಡ ಮೈಸೂರಿನಷ್ಟೇ ವೈಭವದಿಂದ ದಸರಾ ಉತ್ಸವ ನಡೆಯುತ್ತಿತ್ತು. 1781ರಿಂದ 1809ರವರೆಗೆ ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ರಾಜರು ಆಯುಧಪೂಜೆ, ವಿಶೇಷ ದರ್ಬಾರ್, ಕುದುರೆ ಮತ್ತು ಆನೆಯ ಜಂಬೂಸವಾರಿ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಬ್ರಿಟಿಷರು ಕೊಡಗಿನ ರಾಜರನ್ನು ಬಂಧಿಸಿದ ನಂತರ ವೈಭವದ ದಸರಾ ಅಲ್ಲಿ ಸ್ಥಗಿತಗೊಂಡಿತು.

ಅಂಬಾರಿಗಿಂತಲೂ ತೂಕ ಅಂಬಾರಿಯ ಇತಿಹಾಸ! ಮೈಸೂರು ದಸರಾ ಪ್ರಮುಖ ಆಕರ್ಷಣೆ ಎಂದರೆ ಬರೊಬ್ಬರಿ 750 ಕೆ.ಜಿ. ತೂಕದ ರತ್ನಖಚಿತ ಚಿನ್ನದ ಅಂಬಾರಿ. ಇದು ಮೂಲತಃ ಮಹಾರಾಷ್ಟ್ರದ ದೇವಗಿರಿಯಲ್ಲಿತ್ತು. ತನ್ನ ಸಾಮ್ರಾಜ್ಯವು ನಾಶವಾಗುವ ಸಂದರ್ಭದಲ್ಲಿ ಸಂದರ್ಭದಲ್ಲಿ ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನು ಅದನ್ನು ಬಳ್ಳಾರಿ ಬಳಿಯ ರಾಮದುರ್ಗದಲ್ಲಿ ಕೋಟೆಯಲ್ಲಿ ಮುಚ್ಚಿಟ್ಟನು. 1327ರಲ್ಲಿ ದೆಹಲಿ ಸುಲ್ತಾನರ ದಾಳಿ ಸಂದರ್ಭದಲ್ಲಿ ಹಕ್ಕಬುಕ್ಕರು ಈ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟರು.

ದೆಹಲಿ ಸುಲ್ತಾನರ ಸಾಮ್ರಾಜ್ಯ ಅಂತ್ಯವಾದ ನಂತರ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಆರಂಭಿಸಿ, ಹಂಪಿಯನ್ನು ಎರಡನೇ ರಾಜಧಾನಿ ಮಾಡಿಕೊಂಡು ಅಲ್ಲಿಗೆ ಅಂಬಾರಿಯನ್ನು ಸ್ಥಳಾಂತರಿಸಿದರು. ವಿಜಯನಗರ ಸಾಮ್ರಾಜ್ಯದ ಪತನದ ಸಂದರ್ಭದಲ್ಲಿ ಅಂಬಾರಿಯನ್ನು ಆಂಧ್ರದ ಪೆನಗೊಂಡಕ್ಕೆ ಕೊಂಡೊಯ್ದು, ಸುರಕ್ಷಿತವಾಗಿ ಇರಿಸಲಾಯಿತು. ಮೈಸೂರಿನಲ್ಲಿ ಒಡೆಯರ್ ಆಳ್ವಿಕೆ ಆರಂಭವಾದ ನಂತರ ಅದನ್ನು ಶ್ರೀರಂಗಪಟ್ಟಣಕ್ಕೆ ತರಲಾಯಿತು. ಹೀಗೆ ಸುಮಾರು 800 ವರ್ಷಗಳ ಇತಿಹಾಸವನ್ನು ಅಂಬಾರಿ ಹೊಂದಿದೆ.
Dasara #MysuruDasara #Mysore #Ambari #ದಸರಾ #ಮೈಸೂರುದಸರಾ #ಮೈಸೂರು #ಅಂಬಾರಿ