ಬೆಂಗಳೂರು : ಒಂದೊಮ್ಮೆ ಸಿಲಿಕಾನ್ ಸಿಟಿಯ ಜನರಿಗೆ ಬುಧವಾರ ಮುಂಜಾನೆ ತಾವು ಮಲೆನಾಡಲ್ಲಿ ಇರುವ ಭಾವನೆ ಬಂದಿತು. ಇಂದು ಬೆಂಗಳೂರು ಅಕ್ಷರಷಃ ಮಲೆನಾಡಾಗಿ ಪರಿವರ್ತನೆಗೊಂಡಿದೆ. ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರ ಪ್ರಭಾವದಿಂದ ಬೆಂಗಳೂರಿನ ಜನ ಮನೆಯಿಂದಲೇ ಮಳೆಯ ಆನಂದವನ್ನು ಪಡೆಯುತ್ತಿದ್ದಾರೆ. ಅಕ್ಟೋಬರ್ 5 ಮತ್ತು 6 ರಂದು ಬಹುತೇಕ ಕಡೆ ಮಳೆ ಬೀಳುವ ಸಂಭವವಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಕೂಡ ನೀಡಿತ್ತು.

ಕಳೆದ ಭಾನುವಾರ ರಾತ್ರಿ ಸುರಿದ ಮಳೆಗೆ ಸಂಪೂರ್ಣ ಬೆಂಗಳೂರು ಸ್ತಬ್ದವಾಗಿತ್ತು, ಕೆಲವೆಡೆ ಕಟ್ಟಡ ಕುಸಿಯುವ ಭೀತಿ ಎದುರಾದರೆ ಮತ್ತೆ ಹಲವೆಡೆ ವಾಹನಗಳು ಕೆಟ್ಟು ನಿಂತ ದೃಶ್ಯಗಳು ಸಾಮಾನ್ಯವಾಗಿದ್ದವು. ಸೋಮವಾರ ಯಾವುದೇ ಮಳೆ ಸುರಿಯದ ಹಿನ್ನಲೆ ಬೆಂಗಳೂರಿಗರ ದಿನಚರಿ ಮತ್ತೆ ಎಂದಿನಂತೆ ಆರಂಭವಾಗಿತ್ತು. ಮಂಗಳವಾರ ರಾತ್ರಿ ಮತ್ತೆ ಮಳೆ ಆರ್ಭಟ ಕೇಳಿಸಿದೆ. ಕಳೆದ ರಾತ್ರಿಯಿಂದಲೇ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಇಂದು ಬೆಳಿಗ್ಗೆ ಬೆಂಗಳೂರು ಮಲೆನಾಡಿನ ತರ ಭಾಸವಾಗುತ್ತಿತ್ತು.. ನಗರದಲ್ಲಿ ಇಂದು ಗರಿಷ್ಠ 30 ಮತ್ತು ಕನಿಷ್ಠ 21 ಡಿಗ್ರಿ ಸೇಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಯನಗರ, ಬಸವನಗುಡಿ, ವಿದ್ಯಾಪೀಠ ವೃತ್ತ, ಹನುಮಂತನಗರ, ರಾಮಕೃಷ್ಣ ಆಶ್ರಮ, ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿಯಿಂದ ಮಳೆ ಸುರಿಯುತ್ತಲೇ ಇದೆ. ಬುಧವಾರ ಬೆಳಗ್ಗೆ ಮಳೆಯಿಂದಾಗಿ ವಾಹನ, ಜನರ ಸಂಚಾರ ವಿರಳವಾಗಿದೆ. ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಆರ್. ಆರ್. ನಗರ, ಸದಾಶಿವ ನಗರ, ವಿಜಯನಗರ, ಹಲಸೂರು, ಕೆ. ಆರ್. ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಹಲವು ಕಡೆ ರಸ್ತೆಗಳು ಜಲಾವೃತಗೊಂಡಿವೆ.

ನೈರುತ್ಯ ಮಾನ್ಸೂನ್ ಇನ್ನೇನು ಕರ್ನಾಟಕದಲ್ಲಿ ಕೊನೆಗೊಳ್ಳುತ್ತದೆ ಆದರೆ ಶಾಹೀನ್ ಚಂಡಮಾರುತದ ಪ್ರಭಾವವೂ ಇನ್ನಷ್ಟು ದಿನ ಇರಲಿದೆ ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇನ್ನು ಕೆಲ ಕಾಲ ಇದೇ ರೀತಿ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅಕ್ಟೋಬರ್ 7 ವರೆಗೆ ಬಹುತೇಕ ಇದೇ ಸ್ಥಿತಿ ಇರಲಿದೆ ಎಂದು ಸಹ ಅವರು ತಿಳಿಸಿದ್ದಾರೆ. ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.