ವಯಸ್ಸು ಐವತ್ತು ದಾಟದಿದ್ದರೂ ವಿಪರೀತ ಕೂದಲು ಉದುರುವುದು ಯುವಜನತೆಯ ಬಹುದೊಡ್ಡ ಸಮಸ್ಯೆ. ಕೆಲವರಿಗಂತೂ ಇಪ್ಪತ್ತರ ಆಸುಪಾಸಿನಲ್ಲೇ ಕೂದಲು ಉದುರುವುದು ಆರಂಭವಾಗಿ ಮೂವತ್ತರ ಹೊತ್ತಿಗೆ ಅರ್ಧ ತಲೆ ಬೋಳಾಗಿರುತ್ತದೆ. ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳಿಗೆ ಮರುಳಾಗಿ ನಾನಾ ರೀತಿಯ ದುಬಾರಿ ಶಾಂಪೂ, ಹೇರ್ ಆಯಿಲ್‌ಗಳನ್ನು ಬಳಸಿದರೂ ಕೂದಲು ಉದುರುವುದು ಮಾತ್ರ ನಿಂತಿರುವುದಿಲ್ಲ. ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಬಳಸಿ ಉಳಿದಿರುವ ಕೂದಲನ್ನೂ ಹಾಳು ಮಾಡಿಕೊಳ್ಳುವ ಬದಲು ಮನೆಮದ್ದಿನ ಮೊರೆ ಹೋಗುವುದು ಉತ್ತಮ. ಕೂದಲು ಉದುರುವುದಕ್ಕೆ ವೈಜ್ಞಾನಿಕ ಕಾರಣಗಳೇನು? ಯಾವ ಮನೆಮದ್ದಿನಿಂದ ಕೂದಲನ್ನು ರಕ್ಷಿಸಿಕೊಳ್ಳಬಹುದು? ಈ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

ಐರನ್, ವಿಟಮಿನ್ ಡಿ, ಜಿಂಕ್ ಹಾಗೂ ಸೆಲಿಯಮ್ ಕೊರತೆಯು ಕೂದಲು ಉದುರಿವುದಕ್ಕೆ ಪ್ರಮುಖ ಕಾರಣಗಳು. ಇದರ ಜೊತೆಗೆ ವಿಟಿಮಿನ್ ಬಿ ಭಾಗವಾಗಿರುವ ಬಯೋಟಿನ್ ಕೊರತೆ ಕೂಡ ಕೇಶ ಸೌಂದರ್ಯವನ್ನು ಹಾಳು ಮಾಡುತ್ತದೆ. ವಂಶಪಾರಂಪರ್ಯವಾಗಿ ಕೂಡ ಈ ಸಮಸ್ಯೆ ಬರುತ್ತದೆ. ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಖಿನ್ನತೆ ಮುಂತಾದ ಕಾಯಿಲೆಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು ಕೂದಲು ಉದುರುವುದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ.

ತಲೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ: ಯಾವುದೇ ಔಷಧಿ ಪ್ರಯೋಗಿಸುವುದಕ್ಕೂ ಮುನ್ನ ತಲೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕೂದಲಿಗೆ ಧೂಳು ಸೇರಿಕೊಳ್ಳದಂತೆ ಎಚ್ಚರವಹಿಸಿ. ಮನೆಯಿಂದ ಹೊರಗೆ ಹೋಗುವಾಗ ಟೋಪಿ ಅಥವಾ ಬಟ್ಟೆ ಸುತ್ತಿಕೊಳ್ಳುವುದು ಒಳ್ಳೆಯದು. ಕೂದಲಿಗೆ ಅತಿಯಾಗಿ ಮಣ್ಣು ಅಥವಾ ಧೂಳು ಸೇರಿದೆ ಎನಿಸಿದರೆ ತಕ್ಷಣವೇ ಸ್ನಾನ ಮಾಡಿ, ಕೂದಲನ್ನು ಸ್ವಚ್ಛಗೊಳಿಸಿ.

ತೆಂಗಿನ ಹಾಲು : ತೆಂಗಿನ ಕಾಯಿಯ ಬಿಳಿ ಭಾಗವನ್ನು ಮಿಕ್ಸಿಗೆ ಹಾಕಿ ರುಬ್ಬಿ, ನಂತರ ಅದನ್ನು ಸೋಸಿದರೆ ತೆಂಗಿನ ಹಾಲು ಸಿಗುತ್ತದೆ. ಇದರಲ್ಲಿರುವ ಪೊಟಾಸ್ಸಿಯಂ ಅಂಶವು ಕೂದಲನ್ನು ಬಲಿಷ್ಠಗೊಳಿಸುತ್ತದೆ. ವಾರದಲ್ಲಿ ಮೂರು ದಿನವಾದರೂ ತೆಂಗಿನ ಹಾಲನ್ನು ತಲೆಗೆ ಹಚ್ಚಿ, ಒಂದು ಗಂಟೆಯ ನಂತರ ತೊಳೆಯಬೇಕು.

ಕೊಬ್ಬರಿ ಎಣ್ಣೆ: ಕೂದಲಿನ ಬೇರುಗಳಿಗೆ ಪ್ರೋಟೀನ್ ಕೊರತೆಯಾಗದಂತೆ ತಡೆಯುವ ಕೋಕೊನಟ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯು ಕೂದಲಿನ ಆರೈಕೆಗೆ ದಿವ್ಯೌಷಧ. ಕೂದಲು ಉದುರುವುದನ್ನು ಕಡಿಮೆ ಮಾಡುವುದರ ಜೊತೆಗೆ ಹೊಟ್ಟಿನ ಸಮಸ್ಯೆಯನ್ನೂ ಇದು ನಿವಾರಿಸಬಲ್ಲದು. ರಾಸಾಯನಿಕಗಳು ಮಿಶ್ರವಾಗಿರದ ಶುದ್ಧ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿ 15 ನಿಮಿಷ ಮಸಾಜ್ ಮಾಡಿಕೊಳ್ಳಬೇಕು. ಪ್ರತಿದಿನ ಹೀಗೆ ಮಾಡಿದರೆ, 15 ದಿನಗಳಲ್ಲೇ ಪರಿಣಾಮವು ಗಮನಕ್ಕೆ ಬರುತ್ತದೆ.

ಅಲೋವೆರಾ: ಲೋಳೆಸರ ಅಥವಾ ಅಲೋವೆರಾ ಎಲೆಯ ಒಳಗಿರುವ ಜಲ್ ಮಾದರಿಯ ವಸ್ತುವನ್ನು ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಇದು ತಲೆಯ ಚರ್ಮದ ನೈಸರ್ಗಿಕ ಪಿಎಚ್ ಮಟ್ಟವು ಕಡಿಮೆಯಾಗದಂತೆ ಕಾಪಾಡುತ್ತದೆ. ಚರ್ಮದ ಆಳಕ್ಕೆ ಇಳಿದು ದೀರ್ಘಾವಧಿಯಲ್ಲಿ ಕೂದಲು ಚೆನ್ನಾಗಿ ಬೆಳಯುವಂತೆ ಮಾಡುತ್ತದೆ.

ಬೀಟ್ರೂಟ್ ಜ್ಯೂಸ್: ಸದೃಢ ಕೂದಲಿಗೆ ಅಗತ್ಯವಿರುವ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪಾಸ್ಪರಸ್ ಅಂಶಗಳು ಬೀಟ್ರೂಟ್‌ನಲ್ಲಿರುತ್ತದೆ. ಬಿಟ್ರೂಟ್ ಎಲೆಗಳು ಹಾಗೂ ಗೆಡ್ಡೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ತಲೆಗೆ ಹಚ್ಚಿಕೊಳ್ಳಬೇಕು. 20 ನಿಮಿಷಗಳ ನಂತರ ತೊಳೆದುಕೊಳ್ಳಬಹುದು. ವಾರದಲ್ಲಿ ಎರಡು ಬಾರಿಯಾದರೂ ಹೀಗೆ ಮಾಡುವುದರಿಂದ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ.

ಮೆಂತ್ಯೆ: ಮೆಂತ್ಯೆ ಕಾಳುಗಳನ್ನು ಆರೇಳು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ರುಬ್ಬಿ ಪೇಸ್ಟ್ ಮಾಡಿ, ತಲೆಗೆ ಹಚ್ಚಿಕೊಳ್ಳಬೇಕು. ಅರ್ಧ ಗಂಟೆಯ ನಂತರ ತೊಳೆದುಕೊಳ್ಳಬಹುದು. ನೆನೆಸಿದ ಮೆಂತ್ಯೆಯಲ್ಲಿರುವ ಪ್ರೋಟೀನ್‌ಗಳು ಹಾಗೂ ನಿಕೋಟಿನಿಕ್ ಆಸಿಡ್ ಕೂದಲು ಸೋಂಪಾಗಿ ಬೆಳೆಯಲು ಅವಶ್ಯಕವಾಗಿದೆ.