ಲಕ್ನೌ : ಲಖಿಂಪುರ್-ಖೇರಿಯಲ್ಲಿ ಕೇಂದ್ರ ಸಚಿವರ ಬೆಂಗಾವಲಿನಲ್ಲಿದ್ದ ಸಚಿವರ ಪುತ್ರನ ಕಾರು ಹರಿದು ಪ್ರತಿಭಟನಾ ನಿರತ ರೈತರ ಸಾವು ಸಂಭವಿಸಿದೆ. ಈ ಹಿಂಸಾಚಾರದಲ್ಲಿ ಒಟ್ಟು 8 ಸಾವು ಆಗಿದ್ದು ಅದರಲ್ಲಿ 4 ಜನ ಮೃತರು ರೈತರು ಮತ್ತು 4 ಜನ ಮೃತರು ಬಿಜೆಪಿ ಕಾರ್ಯಕರ್ತರು ಎಂದು ತಿಳಿದುಬಂದಿದೆ, ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು “ನನ್ನ ಮಗ ಇಲ್ಲಿ ಇರಲೇ ಇಲ್ಲ” ಎಂದು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಯುಪಿ ಉಪಮುಖ್ಯಮಂತ್ರಿ ಕೇಶವ ಮೌರ್ಯ ಅವರು ಕಾರ್ಯಕ್ರಮವೊಂದಕ್ಕಾಗಿ ಲಖಿಂಪುರ್ ಖೇರಿ ತಲುಪಿದ್ದರು. ಕಳೆದೊಂದು ವರ್ಷದಿಂದ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರಿಗೆ ಈ ಮಾಹಿತಿ ಬಂದಾಗ ಅವರು ಭಾನುವಾರ ಬೆಳಿಗ್ಗೆ 8 ಗಂಟೆಗೆ ಹೆಲಿಪ್ಯಾಡ್ ತಲುಪಿ ಅದನ್ನು ಸಂಪೂರ್ಣ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ : ಡ್ರಗ್ಸ್ ಸುಳಿಯಲ್ಲಿ ಬಿದ್ದ ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಪುತ್ರ ಆರ್ಯನ್
ಇದಾದ ನಂತರ, ಮಧ್ಯಾಹ್ನ 2.45 ರ ಸುಮಾರಿಗೆ, ಮಿಶ್ರ ಮತ್ತು ಮೌರ್ಯರ ವಾಃನಗಳ ಸಮೇತ ಅವರ ಬೆಂಗಾವಲು ವಾಹನಗಳು ಸೇರಿದಂತೆ ರಸ್ತೆ ಮಾರ್ಗವಾಗಿ ಟಿಕೊನಿಯಾ ಮಾರ್ಗವಾಗಿ ಹಾದುಹೋಗುತ್ತಿತ್ತು, ರೈತರು ಕಪ್ಪು ಬಾವುಟಗಳನ್ನು ತೋರಿಸುತ್ತ ಅವರ ವಾಹನಗಳ ಬಳಿ ಓಡಲು ಶುರು ಮಾಡುತ್ತಿದ್ದಂತೆಯೇ ಅದೇ ಬೆಂಗಾವಲಿನ ವಾಹನದಲ್ಲಿದ್ದ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ತಮ್ಮ ಕಾರನ್ನು ರೈತರ ಮೇಲೆ ಹತ್ತಿಸಿದರು. ಪರಿಣಾಮವಾಗಿ 4 ಜನ ರೈತರು ಮೃತಪಟ್ಟಿದ್ದಾರೆ. ಇನ್ನು ಈ ಘಟನೆಯಿಂದ ಕೆರಳಿದ ರೈತರು ಸಚಿವರ ಪುತ್ರನ ಕಾರು ಸೇರಿದಂತೆ ಎರಡು ಕಾರುಗಳಿಗೆ ಬೆಂಕಿ ಇಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂಸಾಚಾರದಲ್ಲಿ 4 ಜನ ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಲಖಿಂಪುರ್ ಖೇರಿಯ ಎಎಸ್ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.

ಲಖಿಂಪುರದಲ್ಲಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಆಡಳಿತವು ಘಟನಾ ಸ್ಥಳದ ಸುತ್ತ ಮುತ್ತ 20 ಕಿಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕೂಡ ಈ ಪ್ರದೇಶಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಕೂಡ ಲಖಿಂಪುರ್ ತಲುಪುತ್ತಿದ್ದಾರೆ.