ಏರ್ ಇಂಡಿಯಾದಲ್ಲಿರುವ ಸಂಪೂರ್ಣ ಶೇ .100 ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಟೆಂಡರ್ ಕರೆದಿತ್ತು. ಈಗ ಕೇಂದ್ರ ಸರ್ಕಾರವೂ ಟಾಟಾ ಸನ್ಸ್ ಬಿಡ್ ಅನ್ನು ಒಪ್ಪಿಕೊಂಡಿರುವುದರಿಂದ ಏರ್ ಇಂಡಿಯಾ ಈಗ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿದೆ. ಏರ್ ಇಂಡಿಯಾಕ್ಕಾಗಿ ರಚಿಸಲಾಗಿರುವ ಸಮಿತಿಯು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಒಳಗೊಂಡಿದೆ. ಮೂಲಗಳ ಪ್ರಕಾರ, ಏರ್ ಇಂಡಿಯಾದ ಮೀಸಲು ಬೆಲೆಯನ್ನು 15,000 ದಿಂದ 20,000 ಕೋಟಿಗೆ ನಿಗದಿ ಮಾಡಲಾಗಿದೆ.

ಟಾಟಾ ಸಮೂಹ ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಅವರಿಗಿಂತ ಸುಮಾರು 3,000 ಕೋಟಿ ರೂ. ಹೆಚ್ಚಾಗಿ ಬಿಡ್ ಸಲ್ಲಿಸಿದ್ದರು ಹಾಗಾಗಿ ಏರ್ ಇಂಡಿಯಾ ಸುಮಾರು 68 ವರ್ಷಗಳ ನಂತರ ಸ್ವದೇಶಕ್ಕೆ ಮರಳಿದಂತಾಗಿದೆ. ಏರ್ ಇಂಡಿಯಾಕ್ಕೆ ಬಿಡ್ಡಿಂಗ್ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿತ್ತು. ಅಂದಿನಿಂದ ಟಾಟಾ ಸಮೂಹ ಏರ್ ಇಂಡಿಯಾವನ್ನು ಖರೀದಿಸಬಹುದು ಎಂದು ಊಹಿಸಲಾಗಿತ್ತು. ಈಗ ಅದರಂತೆಯೇ ಆಗಿದ್ದು 1932 ರಲ್ಲಿ ಟಾಟಾ ಸಮೂಹ ಪ್ರಾರಂಭಿಸಿದ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹದ ಪಾಲಾದಂತಾಗಿದೆ.

ಟಾಟಾ 1932 ರಲ್ಲಿ ಏರ್ ಇಂಡಿಯಾವನ್ನು ಆರಂಭಿಸಿದರು ಏರ್ ಇಂಡಿಯಾವನ್ನು ಟಾಟಾ ಗ್ರೂಪ್ 1932 ರಲ್ಲಿ ಆರಂಭಿಸಿತು. ಟಾಟಾ ಸಮೂಹದ ಜೆಆರ್‌ಡಿ ಟಾಟಾ ಇದರ ಸ್ಥಾಪಕರು. ಅವರೇ ಪೈಲಟ್ ಆಗಿದ್ದರು. ನಂತರ ಅದನ್ನು ಟಾಟಾ ಏರ್ ಸರ್ವಿಸ್ ಎಂದು ಹೆಸರಿಸಲಾಯಿತು. 1938 ರ ಹೊತ್ತಿಗೆ, ಕಂಪನಿಯು ತನ್ನ ದೇಶೀಯ ವಿಮಾನಗಳನ್ನು ಆರಂಭಿಸಿತು. ಎರಡನೆಯ ಮಹಾಯುದ್ಧದ ನಂತರ, ಇದನ್ನು ಸರ್ಕಾರಿ ಕಂಪನಿಯಾಗಿ ಮಾಡಲಾಯಿತು. ಸ್ವಾತಂತ್ರ್ಯದ ನಂತರ ಸರ್ಕಾರವು ಅದರಲ್ಲಿ 49% ಪಾಲನ್ನು ಖರೀದಿಸಿತು.