ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ ಜಡಿದಿದೆ, ಮಾಲ್ ಮಾಲೀಕರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ ಎನ್ನು ಕಾರಣಕ್ಕೆ ಬೀಗ ಹಾಕಲಾಗಿದ್ದು ಬಿಬಿಎಂಪಿ ಸಿಬ್ಬಂದಿಗಳು ಮತ್ತು ಮಾರ್ಷಲ್‌ಗಳು ಸ್ಥಳದಲ್ಲಿದ್ದಾರೆ. ಬಿಬಿಎಂಪಿ ಈ ಕುರಿತು ಅನೇಕ ಬಾರಿ ಅಧಿಕೃತವಾಗಿ ತಿಳಿಸಿದ್ದರೂ ಕೂಡ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿ ಇಷ್ಟು ದಿನ ಮಂತ್ರಿ ಮಾಲ್ ನ ಮಾಲೀಕರು ಸತಾಯಿಸುತ್ತಿದ್ದರೆನ್ನಲಾಗಿದೆ.

ಮಂತ್ರಿಮಾಲ್ ಇಲ್ಲಿವವರೆಗೂ ಬರೋಬ್ಬರಿ 27 ಕೋಟಿ 22 ಲಕ್ಷ 6 ಸಾವಿರದ 302 ರೂಪಾಯಿಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ವಿಷಯವಾಗಿ ಬಿಬಿಎಂಪಿ ಮಾಲ್ ಮಾಲೀಕರಿಗೆ ಅನೇಕ ಬಾರಿ ನೋಟಿಸ್ ನೀಡಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಇಂದು ತೆಗೆದುಕೊಂಡ ಕಠಿಣ ಕ್ರಮದ ಪರಿಣಾಮವಾಗಿ ಮಾಲ್ ನ ಮುಖ್ಯದ್ವಾರಕ್ಕೆ ಬೀಗ ಜಡಿದರು.

ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದ ತಂಡ ಮಂತ್ರಿ ಮಾಲ್‌ಗೆ ತೆರಳಿದ್ದು, ಮಾಲ್‌ನಲ್ಲಿದ್ದ ಜನರನ್ನು ಹೊರಗಿ ಕಳುಹಿಸಿ, ಮುಖ್ಯ ದ್ವಾರಕ್ಕೆ ಬೀಗ ಜಡಿಸಿದ್ದಾರೆ. ಗ್ರಾಹಕರು ಮಾಲ್‌ನಿಂದ ವಾಪಸ್ ತೆರಳಿದ್ದಾರೆ. ಅಧಿಕಾರಿಗಳು ಮುಖ್ಯ ಆಯುಕ್ತರ ನಿರ್ದೇಶನದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಮಾಲೀಕರು ಈ ಹಿಂದೆ ಆಸ್ತಿ ತೆರಿಗೆ ಪಾವತಿಸಲು ನೀಡಿದ ಚೆಕ್ ಒಂದು ಬೌನ್ಸ್ ಆಗಿದ್ದು ಈ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ : BBMP Alert : ಶಿಥಿಲ ಕಟ್ಟಡಗಳ ಮರು ಸಮೀಕ್ಷೆ; 15 ದಿನದಲ್ಲಿ ವರದಿ ನೀಡುವಂತೆ ಬಿಬಿಎಂಪಿ ಆದೇಶ
ಸದ್ಯಕ್ಕೆ 5 ಕೋಟಿ ರೂಪಾಯಿ ತೆರಿಗೆಯನ್ನು ಮಾಲೀಕರು ತಕ್ಷಣವೇ ಪಾವತಿಸಬೇಕು. ಮಾಲೀಕರು ಇದಕ್ಕೆ ಒಪ್ಪಿಗೆ ನೀಡದಿದ್ದರೆ ಮಾಲ್ ನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಹೇಳಿದ್ದಾರೆ. ಮಂತ್ರಿ ಮಾಲ್‌ನ ಮಾಲೀಕರು 5 ಕೋಟಿ ರೂಪಾಯಿ ಪಾವತಿಸಿರುವ ಡಿಡಿಯನ್ನು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅಧಿಕಾರಗಳ ಮುಂದಿನ ನಡೆ ಏನು ಎಂದು ತಿಳಿಯಬೇಕಿದೆ.