ಭಾರತದ ಪ್ರಮುಖ ಫುಡ್ ಡೆಲಿವರಿ ಕಂಪನಿಯಾದ ಜೊಮ್ಯಾಟೋದ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗೌರವ್ ಗುಪ್ತ(Gaurav Gupta) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಮೂಲಕ ಜೊಮ್ಯಾಟೋದೊಂದಿಗಿನ 6 ವರ್ಷಗಳ ಸಂಬಂಧ ಮುಗಿದಂತಾಗಿದೆ.
ಹೌದು ಜೊಮ್ಯಾಟೋದಿಂದ ತಿಂಗಳ ಹಿಂದೆ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಸೇವೆ ಸ್ಥಗಿತಗೊಳಿಸೋದಾಗಿ ಘೋಷಿಸಲಾಗಿತ್ತು.. ಇದೇ ತಿಂಗಳ 17 ರಿಂದ ಸ್ಥಗಿತಗೊಳಿಸಲಾಗಿತ್ತು.. ಇದ್ರ ಬೆನ್ನಲ್ಲೇ ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ ನೀಡಿದ್ದಾರೆ.

ಕಳೆದ ಜುಲೈನಲ್ಲಿ ಜೊಮ್ಯಾಟೊ ಫುಡ್ ಡೆಲಿವರಿ ಜೊತೆಗೆ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುವ ಸೇವೆ ಆರಂಭಿಸಲಾಗಿತ್ತು. ಕೇವಲ 45 ನಿಮಿಷಗಳಲ್ಲಿ ಗ್ರಾಹಕರಿಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಹೇಳಿತ್ತು.
ಆದ್ರೆ ಆನ್ಲೈನ್ ಗ್ರಾಸರಿ ಡೆಲಿವರಿ ಪ್ಲಾಟ್ಫಾರ್ಮ್ ನಲ್ಲಿ ಜೊಮ್ಯಾಟೊ ಕಂಪನಿಗೆ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗುತ್ತಿರಲಿಲ್ಲಾ. ಇದು ಗ್ರಾಹಕರಲ್ಲಿ ಬೇಸರ ಹಾಗೂ ಅಸಮಾಧಾನ ಮೂಡಿಸಿತ್ತು. ಹೀಗಾಗಿ, ಮನೆಬಾಗಿಲಿಗೆ ದಿನಸಿ ಪೂರೈಕೆ ಮಾಡುವ ಸೇವೆ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಜೊಮ್ಯಾಟೊ ಕಂಪನಿ ಘೋಷಿಸಿತ್ತು.

ಇನ್ನೂ ಗೌರವ್ ಗುಪ್ತ ಜೊಮ್ಯಾಟೋ ಸಿಒಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಜೊಮ್ಯಾಟೋ ಷೇರುಗಳ ಮೌಲ್ಯ ಶೇ. 1ರಷ್ಟು ಕುಸಿತ ಕಂಡಿದೆ. ತಮ್ಮ ರಾಜೀನಾಮೆ ಬಗ್ಗೆ ಖಚಿತಪಡಿಸಿರುವ ಗೌರವ್ ಗುಪ್ತ, ನಾನು ನನ್ನ ಜೀವನದ ಮತ್ತೊಂದು ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. 6 ವರ್ಷಗಳ ಕಾಲ ಜೊಮ್ಯಾಟೋದ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ನಾನು ಇನ್ನು ಮುಂದೆಯೂ ಕೂಡ ಜೊಮ್ಯಾಟೋವನ್ನು ಮೊದಲಿನಂತೆಯೇ ಪ್ರೀತಿಸುತ್ತೇನೆ. 6 ವರ್ಷಗಳ ಹಿಂದೆ ಜೊಮ್ಯಾಟೋ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು ಎಂಬ ನಿರೀಕ್ಷೆಯೇ ಇಲ್ಲದೆ ಈ ಕಂಪನಿ ಆರಂಭಿಸಲಾಗಿತ್ತು. ಈ 6 ವರ್ಷಗಳ ಪ್ರಯಾಣ, ಸವಾಲು ಮರೆಯಲು ಸಾಧ್ಯವಿಲ್ಲ. ನಾವು ಈಗ ಸಾಧನೆ ಮಾಡಿರುವ ಬಗ್ಗೆ ಬಹಳ ಹೆಮ್ಮೆಯಿದೆ. ಜೊಮ್ಯಾಟೋ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ. ಜೊಮ್ಯಾಟೋದೊಂದಿಗಿನ ನನ್ನ ಸಂಬಂಧ ಕೊನೆಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.