ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತಪರ ಸಂಘಟನೆಗಳು ಮತ್ತೆ ಸಿಡಿದೆದ್ದಿದ್ದು, ಇಂದು ಭಾರತ್ ಬಂದ್ಗೆ ಕರೆ ನೀಡಿವೆ.

ಹಾಗಾದ್ರೆ ಕರ್ನಾಟಕದಲ್ಲಿ ಬಂದ್ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ, ರೈತರ ಪರ ಸಂಘಟನೆಗಳಿಂದ ಪ್ರತಿಭಟನೆ, ಧರಣಿ, ಮೆರವಣಿಗೆ, ಹೆದ್ದಾರಿ ಬಂದ್ ಮಾಡಲಾಗ್ತಿದೆ. ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ರೈತರಿಂದ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ.
ಖಾಕಿ ಕಣ್ಗಾವಲು

ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನಲೆ, ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಇಟ್ಟಿದೆ. ನಗರದಾದ್ಯಂತ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಆಯುಕ್ತರುಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 12 ಡಿಸಿಪಿಗಳು, ಎಸಿಪಿಗಳು, 100ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು, 200ಕ್ಕೂ ಹೆಚ್ಚು ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಇನ್ನೂ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಹೊಯ್ಸಳ, ಚೀತಾ ವಾಹನಗಳ ಮೂಲಕ ಪೊಲೀಸ್ ಪಡೆ ನಿರಂತರ ಗಸ್ತು ತಿರುಗುತ್ತಿದ್ದಾರೆ. ಪ್ರತಿ ವಿಭಾಗದಲ್ಲಿ ಆಯಾ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಹೆಚ್ಚುವರಿಯಾಗಿ 30ಕ್ಕೂ ಹೆಚ್ಚು ಕೆಎಸ್ಆರ್ ಪಿ ತುಕಡಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರದ ಪ್ರಮುಖ ರಸ್ತೆ, ವೃತ್ತ, ಜಂಕ್ಷನ್ ಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೈತರ ರ್ಯಾಲಿ ಹಾಗೂ ಹೆದ್ದಾರಿ ತಡೆ ವೇಳೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ತುಮಕೂರು ರಸ್ತೆ, ಏರ್ಪೋರ್ಟ್ ಸಂಪರ್ಕಿಸುವ ದೇವನಹಳ್ಳಿ ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆಯಾಗದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಮೆಜೆಸ್ಟಿಕ್ ಸುತ್ತಲೂ ಬಾರಿ ಪೋಲಿಸ್ ಬಿಗಿ ಭದ್ರತೆ ವಹಿಸಲಾಗಿದೆ. ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಇಂದು ಬಂದ್ ಹಿನ್ನೆಲೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಮೆಜೆಸ್ಟಿಕ್ ಸುತ್ತಮುತ್ತಲು ನಿಯೋಜನೆ ಮಾಡಲಾಗಿದೆ.
Bharath bhandh