ದಕ್ಷಿಣ ಕನ್ನಡ : ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ದೇಶಾದ್ಯಂತ ರೈತ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿದ್ದು, ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಇಲ್ಲವಾದರೂ ಮಂಗಳೂರಿನಲ್ಲಿ ಹಲವೆಡೆ ಕಾಂಗ್ರೆಸ್, ಎಡಪಕ್ಷ, ಪಾಪ್ಯುಲರ್ ಫ್ರಂಟ್ ಸೇರಿದಂತೆ ಸಮಾನಮನಸ್ಕ ಪಕ್ಷಗಳು ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿದವು.

ಸಾಂಕೇತಿಕ ಪ್ರತಿಭಟನೆ
ಬಂಟ್ವಾಳ ಬಿ.ಸಿ. ರೋಡ್ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಭಾರತ್ ಬಂದ್ ಬೆಂಬಲಿಸಿ ರೈತ, ಕಾರ್ಮಿಕ, ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ನೆಡೆಯಿತು.
ಈ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಬೇಡಿಕೆಗಳ ಜತೆಗೆ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗ, ಡಿಸಿ ಮನ್ನಾ ಜಮೀನು, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ, ಮಂಗಳೂರು- ಕಾರ್ಕಳ ಹೆದ್ದಾರಿ ಭೂಸ್ವಾಧೀನದಲ್ಲಿ ಕೃಷಿ ಭೂಮಿಗೆ ನಿಕೃಷ್ಟ ಪರಿಹಾರ ಇತ್ಯಾದಿ ಸ್ಥಳೀಯ ಸಮಸ್ಯೆಗಳ ಇತ್ಯರ್ಥಮಾಡಿಕೊಳ್ಳಲು
ಪ್ರತಿಭಟನೆ ನಡೆಸಿದರು.

ಎಸ್ಡಿಪಿಐ ರಾಷ್ಟ್ರೀಯ ಸಮಿತಿಯು ಬೆಂಬಲ ಸೂಚಿಸಿದ್ದು,ದ ಕ. ಜಿಲ್ಲೆಯ ಪುತ್ತೂರು, ಬಿ.ಸಿ. ರೋಡ್ ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ, ಹಕ್ಕೊತ್ತಾಯ ರ್ಯಾಲಿ, ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ತಿಳಿಸಿದ್ದಾರೆ. ಕ್ಲಾಕ್ ಟವರ್ ಸಮೀಪ ಪ್ರತಿಭಟನಾ ಕಾರ್ಯಕ್ರಮ ನಡೆಯಲಿದೆ ಎಂದು ಕಮ್ಯೂನಿಸ್ಟ್ ಮುಖಂಡ ಬಿ.ಎಂ. ಭಟ್ ತಿಳಿಸಿದರೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮಿಯಾಜ್ ಮಾಹಿತಿ ನೀಡಿದ್ದಾರೆ.
ಬಸ್ ಸಂಚಾರ ಯಥಾಸ್ಥಿತಿ
ಬಂದ್ ಹಿನ್ನಲೆ, ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತೆ ಇದ್ದು, ರಿಕ್ಷಾ, ಟ್ಯಾಕ್ಸಿ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ. ಇನ್ನು ಅಂಗಡಿ ಮುಂಗಟ್ಟುಗಳು, ಹೊಟೇಲ್ಗಳು, ಸರಕಾರಿ, ಖಾಸಗಿ ಕಚೇರಿಗಳು ತೆರೆದಿವೆ.. ಬಂದ್ ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು “ರೈತರು ದೇಶದ ಬೆನ್ನೆಲುಬು. ಅವರಿಗೆ ನಮ್ಮ ನೈತಿಕ ಬೆಂಬಲ ಇದ್ದೇಇರುತ್ತದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರ ನಿಲ್ಲಿಸುವುದಿಲ್ಲ” ಎಂದು ಪರೋಕ್ಷವಾಗಿ ಬಂದ್ ಗೆ ಬೆಂಬಲಿಸಿದರು.
ಬೆಳ್ತಂಗಡಿಯಲ್ಲಿ ಪ್ರತಿಭಟನೆ
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೊಕಿನಲ್ಲಿ ಬಂದ್ ಗೆ ಯಾವುದೆ ಬೆಂಬಲವಿಲ್ಲವಾದರು, ಕಮ್ಯುನಿಷ್ಟ್ ಪಕ್ಷಗಳು ಪ್ರತಿಭಟಿಸಿದರು.
ಉಡುಪಿಯಲ್ಲಿ ಬಂದ್‌ಗೆ ಬೆಂಬಲ ನೂತನ ಕೃಷಿ ಕಾಯ್ದೆ ವಿರೋಧಿಸಿ ದೇಶ್ಯಾದಂತ ಕರೆ ನೀಡಿದ್ದ ಬಂದ್ ಗೆ ಉಡುಪಿ ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು, ಪ್ರತಿಭಟನಾ ಜಾಥ ನಡೆಸಿ ಬೆಂಬಲ ಸೂಚಿಸಿದರು. ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅವರು ಮಾತನಾಡಿ, ಬಸ್ಗಳು ಎಂದಿನಂತೆ ಸಂಚರಿಸಲಿವೆ, ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದಿಂದ ಬಂದ್ಗೆ ಬೆಂಬಲವಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಸಮಾನ ಮನಸ್ಕ ಜನಪರ ಸಂಘಟನೆಗಳೊಂದಿಗೆ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಉಡುಪಿಯಲ್ಲಿ ಜೋಡುಕಟ್ಟೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ, ದಲಿತ ಸಂಘರ್ಷ ಸಮಿತಿ,ಉಡುಪಿ ಜಿಲ್ಲಾ ಸಮಿತಿ, ಸಾಲಿಡಾರಿಟಿ ಯೂತ್ ಮೂಮೆಂಟ್ ಉಡುಪಿ ಜಿಲ್ಲಾ ಘಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ. ಉಡುಪಿಯ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಮಾತನಾಡಿ ಬಂದ್ ಗೆ ನಮ್ಮ ಬೆಂಬಲವಿಲ್ಲ ಹಾಗು ಎಂದಿನಂತೆ ಇಂದೂ ಕೂಡ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಿದರು. ಒಟ್ಟಾರೆ ದ.ಕ ಜಿಲ್ಲೆಯ ಹಲವೆಡೆ ಕಾಂಗ್ರೆಸ್, ಎಡಪಕ್ಷ, ಪಾಪ್ಯುಲರ್ ಫ್ರಂಟ್ ಸೇರಿದಂತೆ ಸಮಾನಮನಸ್ಕ ಪಕ್ಷಗಳು ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು.