ಪಿಸಿಒಎಸ್ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (Polycystic ovary syndrome) ಬಗ್ಗೆ ಜನರಿಗೆ ಮಾಹಿತಿ ನೀಡಲು ಸೆಪ್ಟೆಂಬರ್ ತಿಂಗಳನ್ನು “ಪಿಸಿಒಎಸ್ ಜಾಗೃತಿ ತಿಂಗಳು” ಎಂದು ಆಚರಿಸಲಾಗುತ್ತಿದೆ. ನಿಮ್ಮ ಸೆಕ್ಯುಲರ್ ಟಿವಿ ಕೂಡ ಈ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಪಿಸಿಒಎಸ್ ಸಮಸ್ಯೆಯಿಂದ ಮಹಿಳೆಯ ದೇಹದಲ್ಲಿ ಪುರುಷ ಹಾರ್ಮೋನ್‌ಗಳನ್ನು ವೃದ್ಧಿಯಾಗುವುದು, ದೇಹದ ಅನೇಕ ಭಾಗಗಳಲ್ಲಿ ಕೂದಲು ಬೆಳೆಯುವುದು, ಮೊಡವೆಗಳು ಹೆಚ್ಚಾಗುವುದು ಮುಂತಾದ ಸಮಸ್ಯೆಗಳನ್ನು ತಂದು ಇರುಸುಮುರುಸು ಉಂಟು ಮಾಡುತ್ತದೆ. ಅದೇ ರೀತಿ, ಮಹಿಳೆಯ ಮನಸ್ಸಿನ ಮೇಲೂ ಪಿಸಿಎಸ್‌ಒ ಸಾಕಷ್ಟು ಪರಿಣಾಮ ಬೀರುತ್ತದೆ. ಇದರ ಬಗ್ಗೆ ಈ ಲೇಖನದಲ್ಲಿ ಇಂದು ತಿಳಿದುಕೊಳ್ಳೋಣ ಬನ್ನಿ.

ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪಿಸಿಒಎಸ್ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುರಿತು ಹಲವು ವೈದ್ಯಕೀಯ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಆರೋಗ್ಯವಂತ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಆತಂಕವು ಪಿಸಿಒಎಸ್ ಇರುವ ಮಹಿಳೆಯರನ್ನು ಕಾಡುತ್ತಿರುತ್ತದೆ. ಮುಂದೆ ಏನಾಗುತ್ತದೆಯೋ ಏನೋ ಎಂಬ ಚಿಂತೆಯು ಸದಾ ಅವರನ್ನು ಬಾಧಿಸುತ್ತಿರುತ್ತದೆ. ಮಾನಸಿಕ ಖಿನ್ನತೆ ಅಥವಾ ಡಿಪ್ರೆಷನ್ ಹೋಗುವುದು ಕೂಡ ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರೇ ಹೆಚ್ಚು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಮಾನಸಿಕ ಖಿನ್ನತೆ:
ತಾನು ತೆಳ್ಳಗಿರಬೇಕು, ಜೀರೋ ಸೈಜ್ ದೇಹದಿಂದ ಕಂಗೊಳಿಸಬೇಕು ಎಂದು ಮಹಿಳೆಯರು ಬಯಸುವುದು ಸಹಜ. ಆದರೆ ಆ ಆಸೆಗೆ ಪಿಸಿಒಎಸ್ ಸಮಸ್ಯೆ ಅಡ್ಡಗಾಲು ಹಾಕುತ್ತದೆ. ಅತಿಯಾಗಿ ದಪ್ಪವಾಗುವಂತೆ ಮಾಡಿ ತನ್ನ ದೇಹ ಕುರೂಪವಾಗಿದೆ ಎಂಬ ಭಾವನೆ ಹುಟ್ಟಿಸುತ್ತದೆ. ಜೊತೆಗೆ, ಪಿಸಿಒಎಸ್‌ನಿಂದ ಮೊಡವೆಗಳು ಏಳುವುದು ಕೂಡ ಸೂಕ್ಷ್ಮ ಮನಸ್ಸಿನ ಮಹಿಳೆಯರನ್ನು ಕುಗ್ಗಿಸುತ್ತದೆ. ಈ ಕಾರಣಗಳಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಡಿಮೆ ಉತ್ಸಾಹ:
ಪಿಸಿಒಎಸ್‌ಯಿಂದ ದೇಹಕ ತೂಕ ಅಧಿಕವಾಗುವುದರಿಂದ ಸೋಮಾರಿತನ ಜಾಸ್ತಿಯಾಗುತ್ತದೆ. ಹೆಚ್ಚು ಹೊತ್ತು ನಿದ್ದೆ ಮಾಡಬೇಕು, ಕುಳಿತಲ್ಲೇ ಕುಳಿತಿರಬೇಕು ಎಂಬ ಮನಸ್ಥಿತಿ ಉಂಟಾಗುತ್ತದೆ. ಜೀವನದ ಆಗುಹೋಗುಗಳ ಬಗ್ಗೆ ಉತ್ಸಾಹ ಕುಂದುತ್ತದೆ. ಉದ್ಯೋಗ ಮಾಡುತ್ತಿರುವ ಮಹಿಳೆಯರ ವೃತ್ತಿ ಜೀವನದ ಮೇಲೂ ಪಿಸಿಒಎಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಏಕಾಂಗಿತನ:
ಮನೆಯಲ್ಲೇ ಇದ್ದುಬಿಡೋಣ, ಹೊರಗೆ ಹೋಗುವುದು ಬೇಡ, ಯಾರನ್ನೂ ಭೇಟಿಯಾಗುವುದು ಬೇಡ ಎಂದು ಪಿಸಿಒಎಸ್ ಇರುವ ಅನೇಕರಿಗೆ ಅನಿಸುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಜಗತ್ತಿನಲ್ಲಿ ಎಲ್ಲರೂ ಸುಖವಾಗಿದ್ದಾರೆ, ತಾನು ಮಾತ್ರ ಸಮಸ್ಯೆ ಅನುಭವಿಸುತ್ತಿದ್ದೇನೆ ಎಂಬ ಭ್ರಮೆ ಆವರಿಸುತ್ತದೆ. ಯಾರಾದರೂ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ, ಗೇಲಿ ಮಾಡಿದರೆ ಏನು ಮಾಡುವುದು ಎಂಬ ಕಳವಳದಿಂದ ಏಕಾಂಗಿಯಾಗೇ ಇರಲು ಹೆಚ್ಚು ಇಷ್ಟಪಡುತ್ತಾರೆ.

ವಿನಾಕಾರಣ ಕೋಪ:
ಪಿಸಿಒಎಸ್ ಸಮಸ್ಯೆ ತೀವ್ರಗೊಂಡಾಗ ವಿನಾಕಾರಣ ಕೋಪಗೊಳ್ಳವುದು, ಚಿಕ್ಕಚಿಕ್ಕ ವಿಷಯಕ್ಕೂ ರೇಗಾಡುವುದು ಜಾಸ್ತಿಯಾಗಬಹುದು. ದೇಹದೊಳಗೆ ಹಾರ್ಮೊನಿನಲ್ಲಿ ಉಂಟಾಗುವ ಏರುಪೇರು ಇದಕ್ಕೆ ಕಾರಣ. ಮನಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದನ್ನೂ ಓದಿ: ಮಹಿಳೆಯರಲ್ಲಿ ಹೆಚ್ಚುತ್ತಿರುವ PCOS: ಆತಂಕ ಬೇಡ, ಇಲ್ಲಿದೆ ನಿಯಂತ್ರಣ ವಿಧಾನ
ಚಿಂತೆ ಬೇಡ, ಎಲ್ಲದಕ್ಕೂ ಪರಿಹಾರವಿದೆ!
ಪಿಸಿಒಎಸ್‌ನಿಂದಾಗಿ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ಅನಿಸಿದರೆ, ಭಾರೀ ಚಿಂತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಧೈರ್ಯ ಕಳೆದುಕೊಳ್ಳದೇ ತನ್ನ ನೋವನ್ನು ಪೋಷಕರು ಅಥವಾ ಸಂಗಾತಿಯ ಹತ್ತಿರ ಹಂಚಿಕೊಳ್ಳಬೇಕು. ಮಾನಸಿಕ ವೈದ್ಯರು ಕೌನ್ಸಿಲಿಂಗ್ ಮೂಲಕ ಇದನ್ನು ಗುಣಪಡಿಸಬಲ್ಲರು. ವೈದ್ಯರ ಸಲಹೆಗಳನ್ನು ಪಡೆದು, ಅದಕ್ಕೆ ತಕ್ಕಂತೆ ಜೀವನ ಕ್ರಮ ಹಾಗೂ ಯೋಚನಾ ಲಹರಿಯನ್ನು ಬದಲಿಸಿಕೊಂಡು ಪಿಸಿಒಎಸ್ ಇದ್ದರೂ ಆರಾಮಾಗಿ ಜೀವನವನ್ನು ಮುನ್ನಡೆಸಬಹುದು. ಇದನ್ನೂ ಓದಿ: PCOS ಇರುವವರು ಗರ್ಭ ಧರಿಸಲು ಸಾಧ್ಯವೇ? ಯಾವ ವಯಸ್ಸು ಹೆಚ್ಚು ಸೂಕ್ತ?