ನವದೆಹಲಿ : ಜಮ್ಮು ಕಾಶ್ಮೀರ – ಲಡಾಕ್ ಭಾರತ ಅವಿಭಾಜ್ಯ ಅಂಗ, ಅವು ಯಾವಾಗಲೂ ಭಾರತದ ಅವಿಭಾಜ್ಯವಾಗೇ ಉಳಿಯಲಿವೆ, ಪಾಕ್ ಅಕ್ರಮವಾಗಿ ವಶಪಡಿಸಿಕೊಂಡಿರುವ ಪಿಓಕೆ ಭಾಗವನ್ನು ಕೂಡಲೇ ಖಾಲಿ ಮಾಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಭಯೋತ್ಪಾದನೆಯನ್ನು ರಕ್ಷಿಸುವುದು ಸ್ವೀಕಾರಾರ್ಹವಲ್ಲ ಎನ್ನುತ್ತ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಉಗ್ರರಿಗೆ ಪಾಕ್ ಆತಿಥ್ಯ ವಹಿಸಿದೆ, ಒಸಾಮಾ ಬೀನ್ ಲ್ಯಾಡೆನ್‌ನ್ನ ಹುತಾತ್ಮ ಎಂದು ಪಾಕ್ ನಾಯಕರು ಕರೆಯುತ್ತಾರೆ, ತನ್ನ ಹಿತ್ತಲಲ್ಲಿ ಭಯೋತ್ಪಾದನೆ ಪೋಷಣೆ ಮಾಡುತ್ತಿದೆ ಇದರ ನಷ್ಟ ಇಡೀ ವಿಶ್ವ ಎದುರಿಸುತ್ತಿದೆ ಎಂದು ದುಬೆ ಆರೋಪಿಸಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಆರ್ಟಿಕಲ್ 370 ರದ್ದು ಹಾಗೂ ಪಾಕಿಸ್ತಾನದ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿಯವರ ಸಾವಿನ ಕುರಿತು ಭಾರತ ಸರ್ಕಾರದ ಆಗಸ್ಟ್ 5, 2019 ರ ನಿರ್ಧಾರದ ಬಗ್ಗೆ ಅವರು ಮಾತನಾಡಿದ್ದರು.
ಪ್ರತ್ಯುತ್ತರದ ಹಕ್ಕಿನಲ್ಲಿ ಮಾತನಾಡಿದ ಸ್ನೇಹ ದುಬೆ, ದುರದೃಷ್ಟವಶಾತ್ ಪಾಕಿಸ್ತಾನ ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶ ಪ್ರೇರಿತ ಹೇಳಿಕೆಗಳನ್ನು ನೀಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಳ್ಳುತ್ತಿದೆ. ಭಯೋತ್ಪಾದಕರಿಗೆ ನೆಲೆ ನೀಡುವ ಪಾಕ್, ಗಮನ ಬೇರೆಡೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದರು.
ಭಾರತ ತನ್ನ ನೆರೆಯ ಎಲ್ಲ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದುವ ಇರಾದೆ ಹೊಂದಿದೆ. ನಾವು ಬಂಗಾಳದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಬಾಂಗ್ಲಾದೇಶದ 50 ನೇ ವರ್ಷದ ವರ್ಷಾಚರಣೆಯಲ್ಲಿ ಭಾರತ ಭಾಗಿಯಾಗಿತ್ತು. ಆದರೆ ಪಾಕ್ ಉತ್ತಮ ಸಂಬಂಧ ಹೊಂದುವ ಬದಲು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ “ಭಾರತದ ಅವಿಭಾಜ್ಯ ಮತ್ತು ಎಂದಿಗೂ ಬಿಡಿಸಲಾಗದ ಭಾಗವಾಗಿದೆ” ಕೂಡಲೇ ಜಾಗ ಖಾಲಿ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.