ಜೈಪುರ : ಇಂದು ಬೆಳಿಗ್ಗೆ ಜೈಪುರದ ಚಕ್ಸುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದರೆ, 5 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಕ್ಸುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು ಆ ವ್ಯಾನ್ ಅನ್ನು ಟ್ರಕ್ 2 ಕಿಮೀ ವರೆಗೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವ್ಯಾನ್‌ನಲ್ಲಿ ಸುಮಾರು 11 ಜನರಿದ್ದರು. ಅದರಲ್ಲಿ 5 ಮಂದಿ ರೀಟ್ ಪರೀಕ್ಷೆಗಾಗಿ ಬರನ್ ನಿಂದ ಸಿಕಾರ್ ಗೆ ಹೋಗುತ್ತಿದ್ದರು. ವ್ಯಾನ್‌ನ ಚಾಲಕನೂ ಸೇರಿ ಮೃತರೆಲ್ಲರು ವ್ಯಾನ್‌ನಲ್ಲಿದ್ದವರೇ ಆಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪೊಲೀಸರು ಶವಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಥಳದಲ್ಲಿದ್ದ ಜನರು ವ್ಯಾನ್ ವೇಗವಾಗಿ ಬಂದು ಲಾರಿಗೆ ನುಗ್ಗಿತು ಎಂದು ಹೇಳಿದರು. ವ್ಯಾನ್ ಸುಮಾರು 2 ಕಿಮೀ ದೂರದವರೆಗೆ ಲಾರಿಯಲ್ಲಿಯೇ ಸಿಲುಕಿಕೊಂಡಿತ್ತು. ರಸ್ತೆಯಲ್ಲಿದ್ದ ಜನರು ಲಾರಿ ಚಾಲಕರಿಗೆ ಅಪಘಾತದ ಬಗ್ಗೆ ತಿಳಿಸಿದರು. ಟ್ರಕ್ ಅಷ್ಟು ವೇಗದಲ್ಲಿದ್ದು, ಚಾಲಕ ಕೂಡ ಅಪಘಾತವನ್ನು ಗಮನಿಸಲಿಲ್ಲ. ಬಹಳ ಕಷ್ಟಪಟ್ಟು ಟ್ರಕ್ ಟ್ರೇಲರ್‌ನಿಂದ ವ್ಯಾನ್ ಅನ್ನು ಬೇರ್ಪಡಿಸಲಾಯಿತು ಮತ್ತು ಗಾಯಾಳುಗಳನ್ನು ಹೊರತೆಗೆಯಲಾಯಿತು.