ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ ಶೀಘ್ರವೇ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಈ ಅವಕಾಶಕ್ಕಾಗಿ ಸ್ಟಾರ್ ನಟರ ಚಿತ್ರಗಳು ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಲು ಎದುರು ನೋಡುತ್ತಿವೆ. ಅಕ್ಟೋಬರ್ ಒಳಗೆ ಸರಕಾರ ಚಿತ್ರ ಬಿಡುಗಡೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇರುವುದರಿಂದ ಸ್ಟಾರ್ ನಟರ ಚಿತ್ರಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರು ಚಿತ್ರ ಬಿಡುಗಡೆಗೆ ದಿನಾಂಕ ಅಂದಾಜು ಮಾಡಿದ್ದಾರೆ. ಚಿತ್ರ ಅಭಿಮಾನಿಗಳು ಸ್ಟಾರ್ ನಟರ ಚಿತ್ರಗಳ ವೀಕ್ಷಣೆಗೆ ಕಾದುನೋಡುತ್ತಿದ್ದು, ರಿಲೀಸ್ ಗಾಗಿ ಎದುರುನೊಡುತ್ತಿದ್ದಾರೆ.

ಕೋಟಿಗೊಬ್ಬ 3 ಮೊದಲಿಗೆ ರಿಲೀಸ್:
ಸರಕಾರ ಹೌಸ್ ಫೈಲ್ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಮೊದಲಿಗೆ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್ಗೆ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಅವರು ಸತ್ಯ ಹಾಗೂ ಶಿವ ಆಗಿ ಕಾಣಿಸಿಕೊಂಡಿದ್ದಾರೆ.

ನಿರೀಕ್ಷೆ ಹುಟ್ಟಿಸಿರುವ ಭಜರಂಗಿ 2:
ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿ ಹೌಸ್ ಫುಲ್ ಅವಕಾಶ ಸಿಗದ ಕಾರಣ ರಿಲೀಸ್ ಮುಂದೂಡಿದ ಭಜರಂಗಿ 2 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಶಿವಣ್ಣ ನಟನೆಯ ಭಜರಂಗಿ 2 ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ಗೆ ನಾಯಕಿಯಾಗಿ ‘ಜಾಕಿ’ ಖ್ಯಾತಿಯ ಭಾವನಾ ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಾದು ನೋಡುತ್ತಿದೆ ಸಲಗ:
ದುನಿಯಾ ವಿಜಯ್ ನಟಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ ಸಲಗ ಸಿನಿಮಾ ಭಜರಂಗಿ 2, ಕೋಟಿಗೊಬ್ಬ 3 ಚಿತ್ರದ ರಿಲೀಸ್ ಡೇಟ್ ನೋಡಿಕೊಂಡು ಬಿಡುಗಡೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಕೆಪಿ ಶ್ರೀಕಾಂತ್ ನಿರ್ಮಿಸಿರುವ ಈ ಚಿತ್ರ ಹಿಂದೆ ರಿಲೀಸ್ ಆಗಬೇಕಾಗಿತ್ತು. ಚಿತ್ರದಲ್ಲಿ ವಿಜಯ್ ಜೊತೆ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ ಆಗಿ ನಟಿಸಿದ್ದಾರೆ.

ಡಿಸೆಂಬರ್ ವೇಳೆ ವಿಕ್ರಾಂತ್ ರೋಣ ತೆರೆಗೆ:
ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್ ರೋಣ ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ಚಿತ್ರ ಮಂದಿರಕ್ಕೆ ಬರುವ ನಿರೀಕ್ಷೆ ಹೊಂದಲಾಗಿದೆ. ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾದ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ನಿರೀಕ್ಷೆ ಹುಟ್ಟಿಸಿದೆ.

ಡಿಸೆಂಬರ್ ಕೊನೆಗೆ ಚಾರ್ಲಿ ಪಕ್ಕಾ:
ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಡಿಸೆಂಬರ್ 31ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಸದ್ದು ಮಾಡಿದ್ದು ರಕ್ಷಿತ್ ಶೆಟ್ಟಿ ಜೊತೆಗೆ ನಾಯಿಯೊಂದು ಪಾತ್ರ ಮಾಡಿದೆ. ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಇದೆ.
ಎಲ್ಲ ಸ್ಟಾರ್ ನಟರ ಚಿತ್ರಗಳು ಸರ್ಕಾರದ ಹೌಸ್ ಫುಲ್ ಪ್ರದರ್ಶನದ ಅವಕಾಶಕ್ಕೆ ಕಾಯುತ್ತಿದ್ದು, ಸರ್ಕಾರದ ನಿರ್ಧಾರದ ಮೇಲೆ ಚಿತ್ರದ ರಿಲೀಸ್ ಡೇಟ್ ಘೋಷಣೆ ನಿರ್ಧಾರ ಆಗಲಿದೆ.