ಮುಖವು ಸುಂದರವಾಗಿರಬೇಕೆಂದು ಎಲ್ಲರೂ ಬಯಸುವುದು ಸಹಜ. ಆದರೆ ಮುಖದ ತುಂಬ ಏಳುವ ಪಿಂಪಲ್ಸ್ ಅಥವಾ ಮೊಡವೆಗಳು ನಾವು ಸುಂದರವಾಗಿ ಕಾಣಬೇಕೆಂಬ ಕನಸನ್ನೇ ಹಾಳುಗೆಡವುತ್ತವೆ. ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ಸಾಕಷ್ಟು ನೋವನ್ನೂ ನೀಡುತ್ತವೆ. ಮೊಡವೆಗಳ ನಿವಾರಣೆಗೆ ದುಬಾರಿ ಬೆಲೆಯ ರಾಸಾಯನಿಕ ಕ್ರೀಮ್‌ಗಳನ್ನು ಬಳಸುವ ಬದಲು ಮನೆಯಲ್ಲೇ ಔಷಧಿ ಮಾಡಿಕೊಳ್ಳಬಹುದು. ಈ ಮೂಲಕ ಕಡಿಮೆ ಖರ್ಚಿನಲ್ಲಿ, ಯಾವುದೇ ಅಡ್ಡಪರಿಣಾಮ ಇಲ್ಲದೆಯೇ ಮೊಡವೆಗಳಿಂದ ಪಾರಾಗಬಹುದು.
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದರೆ ಮಡುವೆ ಏಳುವ ಸಾಧ್ಯತೆ ಹೆಚ್ಚು ಎಂದು ಬಹುತೇಕ ವೈದ್ಯರು ಹೇಳುತ್ತಾರೆ. ಇದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ ಕೂಡ. ಆದರೆ ರುಚಿರುಚಿಯಾದ ಕರಿದ ಪದಾರ್ಥಗಳನ್ನು ತಿನ್ನದೆಯೇ ಬದುಕಲು ಬಾಯಿ ಕೇಳಬೇಕಲ್ಲ? ನೀವು ಈ ಮನೆಮದ್ದುಗಳನ್ನು ಸೂಕ್ತ ರೀತಿಯಲ್ಲಿ ಪ್ರಯೋಗಿಸಿದರೆ ಯಾವುದೇ ಆಹಾರ ಸೇವಿಸಿದರೂ ಹೆಚ್ಚು ಮೊಡವೆಯಿಲ್ಲದೇ ಆರಾಮಾಗಿ ಇರಬಹುದು.

ಯಾವ್ಯಾವ ಮನೆಮದ್ದುಗಳು ಮೊಡವೆಗಳನ್ನು ನಿವಾರಸಬಲ್ಲದು? ಅವುಗಳನ್ನು ಹೇಗೆ ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಮೊಡವೆ ನಿವಾರಣೆ ಆಗುತ್ತದೆ? ಯಾವ ಸಮಯದಲ್ಲಿ ಮನೆಮದ್ದು ಉಪಯೋಗಿಸಬೇಕು? ಒಂದೊಂದಾಗಿ ನೋಡೋಣ ಬನ್ನಿ.
ಅಲೋವೆರಾ:
ಅಲೋವೆರಾ ಅಥವಾ ಲೋಳೆಸರವು ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಸಸ್ಯ. ಯಾವುದೇ ಹವಾಮಾನದಲ್ಲೂ ಪಾಟ್‌ಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಗಿಡವಿದು. ಇದರ ಎಲೆಗಳ ಸಿಪ್ಪೆಯನ್ನು ತೆಗೆದರೆ ಒಳಗಡೆ ಜೆಲ್ ರೀತಿಯ ವಸ್ತುವಿರುತ್ತದೆ. ಚೆನ್ನಾಗಿ ಮುಖ ತೊಳೆದು, ಅಲೋವೆರಾ ಜೆಲ್ ಹಚ್ಚಿಕೊಂಡರೆ ಕನಿಷ್ಠ ಎರಡು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಪ್ರತಿದಿನ ಹೀಗೆ ಮಾಡಿದರೆ ಮೊಡವೆಗಳು ಕಡಿಮೆಯಾಗಿರುವುದು ಕೇವಲ ಮೂರ್ನಾಲ್ಕು ದಿನಗಳಲ್ಲಿ ಗಮನಕ್ಕೆ ಬರುತ್ತದೆ.

ಲಿಂಬೆ ರಸ:
ಮೊಡವೆಯ ನಿವಾರಣೆಗಾಗಿ ಸ್ವಲ್ಪ ನೋವನ್ನು ಅನುಭವಿಸಲು ನೀವು ಸಿದ್ಧವಿರುವುದಾದರೆ ಲಿಂಬೆ ಹಣ್ಣಿನ ರಸವು ಅತ್ಯಂತ ಪರಿಣಾಮಕಾರಿ ಔಷಧ. ಮುಖಕ್ಕೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಲಿಂಬೆ ಹಣ್ಣಿನ ರಸ ಹಚ್ಚಿ, ಐದರಿಂದ ಹತ್ತು ನಿಮಿಷಗಳ ನಂತರ ತೊಳೆದರೆ ಮೊಡವೆಗಳು ಶೀಘ್ರವಾಗಿ ಮಾಯವಾಗುತ್ತವೆ. ಅಡುಗೆಗೆ ಹಿಂಡಿದ ಲಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸ್ವಲ್ಪ ರಸ ಉಳಿದಿರುತ್ತದೆ. ಆ ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಉಚ್ಚುವ ಮೂಲಕವೂ ನೀವು ಈ ಚಿಕಿತ್ಸೆ ಮಾಡಿಕೊಳ್ಳಬೇಕು. ಲಿಂಬೆ ಹಣ್ಣಿನ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಿದಾಗ ತಡೆದುಕೊಳ್ಳಲು ಸಾಧ್ಯವಾಗದಷ್ಟು ಉರಿಯುತ್ತದೆ ಎನಿಸಿದರೆ, ಹತ್ತು ಹನಿ ಲಿಂಬೆ ರಸಕ್ಕೆ ಒಂದೆರಡು ಹನಿ ನೀರನ್ನು ಮಿಶ್ರ ಮಾಡಿ ಹಚ್ಚಿಕೊಳ್ಳಬಹುದು.
ಮೆಂತ್ಯೆ:
ಮೆಂತ್ಯೆ ಕಾಳುಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಮೆಂತ್ಯೆಯನ್ನು ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನಂತರ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ, ಸುಮಾರು ಒಂದು ಗಂಟೆಯ ನಂತರ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಹತ್ತು ದಿನಗಳಲ್ಲಿ ಇದರ ಫಲಿತಾಂಶ ಏನೆಂದು ನಿಮಗೇ ಅರಿವಾಗುತ್ತದೆ. ಒಂದು ದಿನಕ್ಕೆ ಕೇವಲ ಮೂರು ಚಮಚ ಮೆಂತ್ಯೆ ಸಾಕಾಗುತ್ತದೆ. ಅಷ್ಟನ್ನು ಮಾತ್ರ ಮಿಕ್ಸಿಯಲ್ಲಿ ಅರೆಯಲು ಸಾಧ್ಯವಾಗದಿದ್ದರೆ ಎರಡ್ಮೂರು ದಿನಕ್ಕೆ ಬೇಕಾಗುವಷ್ಟನ್ನು ಒಮ್ಮೆ ಅರೆದು ಫ್ರಿಜ್‌ನಲ್ಲಿಟ್ಟು ಬಳಸಬಹುದು.

ಜೇನು ತುಪ್ಪ:
ಚರ್ಮಕ್ಕೆ ಸಂಬಂಧಿಸಿದ ಬಹುತೇಕ ಕಾಯಿಲೆಗಳನ್ನು ಗುಣ ಪಡಿಸುವ ಸಾಮರ್ಥ್ಯವನ್ನು ಜೇನು ಹೊಂದಿದೆ. ಮುಖವನ್ನು ತೊಳೆದುಕೊಂಡು ಹತ್ತಿಯಿಂದ ಅಥವಾ ಬೆರಳಿನಿಂದ ಜೇನನ್ನು ಹಚ್ಚಿಕೊಳ್ಳಿ. ಅರ್ಧಗಂಟೆಯ ನಂತರ ಮತ್ತೆ ಮುಖ ತೊಳೆದುಕೊಳ್ಳಿ. ಪ್ರತಿದಿನ ಒಂದು ಅಥವಾ ಎರಡು ಸಲ ಹೀಗೆ ಮಾಡಿದರೆ ಮೊಡವೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ.
ನಿಯಮಿತ ವ್ಯಾಯಾಮ:
ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂಡ ಮೊಡವೆಗಳಿಂದ ಪಾರಾಗಬಹುದು. ವ್ಯಾಯಾಮದಿಂದ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ ಹಾಗೂ ರಕ್ತ ಸಂಚಲನ ಹೆಚ್ಚುತ್ತದೆ. ಹಾಗಾಗಿ ಮೊಡವೆಗಳು ಕೂಡ ಕಡಿಮೆಯಾಗುತ್ತದೆ. ಹೆಚ್ಚು ಬೆವರು ತರಿಸುವಂತಹ ವ್ಯಾಯಾಮಗಳನ್ನು ಪ್ರತಿದಿನವೂ ಮಾಡುವುದು ಮೊಡವೆಗಳನ್ನು ಮಾಯವಾಗಿಸುತ್ತವೆ.