ತಾರಾ ದಂಪತಿಗಳಾದ ನಾಗಚೈತನ್ಯ ಹಾಗೂ ಸಮಂತಾ ನಡುವಣ ಡೈವೋರ್ಸ್ ಸುದ್ದಿಯ ನಡುವೆಯೇ ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಚಿತ್ರ ಶುಕ್ರವಾರ ತೆರೆಯ ಮೇಲೆ ಬರಲಿದೆ.
ನಾಗಚೈತನ್ಯ ಹಾಗೂ ಸಮಂತಾ ನಡುವಣ ಸಂಬಂಧ ಹದಗೆಟ್ಟಿದೆ ಎನ್ನುವ ಗಾಳಿಸುದ್ದಿಗಳು ಹರಡಿರುವ ಬೆನ್ನಲ್ಲೇ ಸಮಂತಾ ಅವರು ಟ್ವೀಟರ್ ಮೂಲಕ ಹೊಸದಾಗಿ ಬಿಡುಗಡೆಯಾಗುತ್ತಿರುವ ಲವ್ ಸ್ಟೋರಿ ತಂಡಕ್ಕೆ ಶುಭ ಹಾರೈಸಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಾಗಚೈತನ್ಯ ” ಥಾಂಕ್ಸ್ ಸ್ಯಾಮ್ ” ಎಂದು ಹರ್ಷ ವ್ಯಕ್ತ ಪಡಿಸಿರುವುದು ಈ ಇಬ್ಬರ ಬಗ್ಗೆ ರೂಮರ್ ಹರಡಿದವರಿಗೆ ಮಾತನಾಡಲು ಹೊಸ ವಿಷಯ ಒದಗಿಸಿದೆ.

ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ 2017ರಲ್ಲಿ ವಿವಾಹ ಬಂಧನಕ್ಕೆ ಒಳಗಾದರು. ಈ ವರ್ಷದ ಜುಲೈ ತಿಂಗಳಿನಲ್ಲಿ ಸಮಂತಾ ರುತ್ ಪ್ರಭು ಅವರು ತಮ್ಮ ಟ್ವೀಟರ್ ಅಕೌಂಟಿನಲ್ಲಿ ಸಮಂತ ಅಕ್ಕಿನೇನಿ ಹೆಸರನ್ನು ತೆಗೆದು ಸಮಂತಾ ಎಂದು ನಮೂದಿಸಿದ್ದರು. ಬಳಿಕ ತಮ್ಮ ಹೆಸರನ್ನು ಎಸ್ ಎಂದು ಬದಲಿಸಿದರು. ಇದರಿಂದ ನಾಗಚೈತನ್ಯ ಜೊತೆಗೆ ಅವರ ಸಂಬಂಧ ಹಾಳಾಗಿರುವ ಬಗ್ಗೆ ರೂಮರ್ ಗಳು ಹರಡಲು ಆರಂಭವಾದವು.

ಸಿನಿಮಾ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೆ ಆಹಾರವಾದ ನಾಗಚೈತನ್ಯ ಹಾಗೂ ಸಮಂತಾ ನಡುವಣ ಸಂಬಂಧ ಈ ತಾರಾ ದಂಪತಿಗಳಿಗೆ ಸಾಕಷ್ಟು ಇರಿಸುಮುರುಸು ಉಂಟು ಮಾಡಿದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಾಗಚೈತನ್ಯ ಅವರು ತಮ್ಮ ಹಾಗೂ ಪತ್ನಿ ಸಮಂತಾ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ರೂಮರ್ ಗಳಿಂದ ನೋವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
“ನಮ್ಮಿಬ್ಬರ ಸಂಬಂಧದ ಬಗ್ಗೆ ರಂಜನಾತ್ಮಕ ಶೀರ್ಷಿಕೆಗಳಲ್ಲಿ ಬರಹ ಪ್ರಕಟವಾದಾಗ ತುಂಬಾ ಬೇಸರವಾಯಿತು. ಆದರೆ ಈ ರೀತಿಯ ಬರಹಗಳು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಇರಲಾರವು. ವಾಸ್ತವಾಂಶ ಹೊಂದಿದ ಸುದ್ದಿಗಳು ಮಾತ್ರ ಕೊನೆಗೆ ಉಳಿದುಕೊಳ್ಳುತ್ತವೆ. ಟಿ ಆರ್ ಪಿ ಹೆಚ್ಚಿಸಲು ಬರೆದ ಸುದ್ದಿಗಳು ಮರೆತು ಹೋಗುತ್ತವೆ ಎನ್ನುವುದನ್ನು ನಾನು ಭಾವಿಸಿದ ಬಳಿಕ ಈ ರೀತಿಯ ರೂಮರ್ ಸುದ್ದಿಗಳು ನನ್ನ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸಿದವು” ಎಂದು ಹೇಳಿದ್ದಾರೆ.

ತಮ್ಮಿಬ್ಬರ ನಡುವಣ ಸಂಬಂಧ ಹದಗೆಟ್ಟಿರುವ ಗಾಳಿಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವ ನಾಗಚೈತನ್ಯ, ವೈಯಕ್ತಿಕ ಹಾಗೂ ವೃತ್ತಿಪರ ಬದುಕನ್ನು ಬೇರೆಯಾಗಿ ಇಟ್ಟುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ” ಸಿನಿಮಾ ಕ್ಷೇತ್ರಕ್ಕೆ ಬಂದಾಗಿನಿಂದ ನಾನು ವೈಯಕ್ತಿಕ ಬದುಕು ಮತ್ತು ವೃತ್ತಿಯ ಬದುಕನ್ನು ಸಪರೇಟ್ ಆಗಿ ಇಟ್ಟುಕೊಳ್ಳುವುದನ್ನು ಕಲಿತಿದ್ದೇನೆ. ಇವೆರಡನ್ನು ಒಟ್ಟಾಗಿ ಎಂದಿಗೂ ಮಿಕ್ಸ್ ಮಾಡಿಲ್ಲ. ಈ ಅಂಶವನ್ನು ನಾನು ಪೋಷಕರಿಂದ ಕಲಿತಿದ್ದು, ಅವರು ಕೆಲಸ ಮಾಡಿ ಮನೆಗೆ ಬಂದಾಗ ಕೆಲಸದ ಬಗ್ಗೆ ಮಾತನಾಡುವುದನ್ನು ಎಂದಿಗೂ ನೋಡಿಲ್ಲ. ಅವರು ಕೆಲಸದ ವಾತಾವರಣದಲ್ಲಿ ವೈಯಕ್ತಿಕ ಬದುಕು ಪ್ರವೇಶಿಸಿದಂತೆ ನೋಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮಿಬ್ಬರ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ್ದ ಸಮಂತಾ, ” ಈ ರೀತಿಯ ವೈಯುಕ್ತಿಕ ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸುವುದನ್ನು ಇಷ್ಟಪಡುವುದಿಲ್ಲ. ಅದು ಫ್ಯಾಮಿಲಿ ಮ್ಯಾನ್ ಸಿನಿಮಾದ ಬಗ್ಗೆ ಟ್ರೊಲ್ ಆಗುತ್ತಿರುವ ವಿಷಯ ಕೂಡ ಆಗಿರಬಹುದು. ಯಾವುದೇ ರೀತಿಯ ಸುದ್ದಿಗೆ ಕಾರಣ ಆಗುವಂತೆ ವರ್ತಿಸುವುದು ಕೂಡ ನನಗೆ ಇಷ್ಟವಾಗುವುದಿಲ್ಲ” ಎಂದು ಹೇಳಿದ್ದರು.

ನಾಗಚೈತನ್ಯ ಜೊತೆಗಿನ ಸಂಬಂಧ ಅಲ್ಲದೇ, ದ ಫ್ಯಾಮಿಲಿ ಮ್ಯಾನ್ 2 ಚಿತ್ರದಲ್ಲಿ ಸಮಂತಾ ಅವರು ಶ್ರೀಲಂಕಾದ ತಮಿಳು ವಿಮೋಚನಾ ರೆಬೆಲ್ ಆಗಿ ಪಾತ್ರ ಮಾಡಿದ ಬಗ್ಗೆ ಸಾಕಷ್ಟು ಟ್ರೋಲ್ ಗೆ ಗುರಿ ಆಗಿದ್ದರು. ಸದ್ಯ ಸಮಂತಾ ಕಾತುವಕುಲು ರೆಂಡು ಕಾದಲ್ ಹಾಗೂ ಶಾಕುಂತಲಂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.