ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ವಿಧಿಸಿರುವ ಶೇ.50 ಪ್ರೇಕ್ಷಕರ ವೀಕ್ಷಣೆಯ ನಿರ್ಬಂಧವನ್ನು ತೆರವು ಮಾಡಲು ಸರ್ಕಾರ ಮುಂದಿನ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ಪ್ರಕರಣಗಳು ಬೆಂಗಳೂರು ವ್ಯಾಪ್ತಿಯಲ್ಲಿ ಕಡಿಮೆ ಆಗುತ್ತಿರುವ ಕಾರಣ ಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶಿಸಲು ಈಗಾಗಲೇ ಬಿಬಿಎಂಪಿ ಒಪ್ಪಿಗೆ ನೀಡಿದೆ. ಈ ಬಗ್ಗೆ ಸರ್ಕಾರ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿದ ಬಳಿಕ ಪ್ರೇಕ್ಷಕರ ವೀಕ್ಷಣೆಯ ನಿರ್ಬಂಧವನ್ನು ತೆಗೆದು ಹಾಕುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಇದನ್ನೂ ಓದಿ : India’s Oldest Masque : ಭಾರತದ ಅತ್ಯಂತ ಹಳೆಯ ಮಸೀದಿ ಚೇರಮಾನ್ ಜುಮಾ ಮಸೀದಿ ನವೀಕರಣ – ಮರಳಿ ಬಂದ ಘತ ವೈಭವ
ನಿರ್ಬಂಧ ಹಿಂದಕ್ಕೆ ಪಡೆಯಲು ಒತ್ತಾಯ: ಈಗಾಗಲೇ ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡುವಂತೆ ಚಿತ್ರ ನಿರ್ಮಾಪಕರು ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ. ಶೇ.50 ಸೀಟುಗಳ ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನ ಮಾಡದಿದ್ದಲ್ಲಿ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಪಕರಿಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹ ಆಗುವುದು ಕಷ್ಟಕರ ಆಗಲಿದೆ. ಈ ಕಾರಣದಿಂದ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರಲು ಹಿಂದೇಟು ಹಾಕುತ್ತಿವೆ.
ಸರಕಾರ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಿದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ಸ್ಟಾರ್ ನಟರ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಗೆ ಸರಕಾರ ಅವಕಾಶ ನೀಡಿದಲ್ಲಿ ಬಿಗ್ ಬಜೆಟ್ ಚಿತ್ರಗಳು ಸಹ ಶೀಘ್ರವೇ ಬೆಳ್ಳಿ ತೆರೆಗೆ ಬರಲಿವೆ. ಇದರಿಂದ ನಟರ ಅಭಿಮಾನಿಗಳು, ಸಿನಿ ರಸಿಕರು ಚಿತ್ರಮಂದಿರಗಳತ್ತ ಮತ್ತೆ ಮುಖ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಬಿಡುಗಡೆಯಾದ ಬೆರಳೆಣಿಕೆ ಚಿತ್ರಗಳು : ಸರ್ಕಾರ ಲಾಕ್ ಡೌನ್ ತೆರವು ಮಾಡಿ ಶೇ. 50 ಸೀಟು ಸಾಮರ್ಥ್ಯದೊಂದಿಗೆ ಚಿತ್ರ ವೀಕ್ಷಣೆಗೆ ಅವಕಾಶ ನೀಡಿದ ಬಳಿಕ ಕೆಲವೇ ಕೆಲವು ಕನ್ನಡ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿವೆ. ಕಲಿವೀರ, ಗ್ರೂಫಿ, ಲಂಕೆ, ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ, ಜಿಗ್ರಿದೋಸ್ತ್ ಸೇರಿದಂತೆ ಕೆಲ ಸಿನಿಮಾಗಳು ಮಾತ್ರ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು ದೊಡ್ಡ ಬಜೆಟಿನ, ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಆಗದೆ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಓಟಿಟಿ ಅಂಗಳಕ್ಕೆ ಮೊರೆ ಹೋದ ಕೆಲವು ಚಿತ್ರಗಳು: ಚಿತ್ರಮಂದಿರಗಳಲ್ಲಿ ಶೇಕಡ 50 ಸಾಮರ್ಥ್ಯದೊಂದಿಗೆ ಚಿತ್ರ ರಿಲೀಸ್ ಮಾಡುವ ಬದಲು ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆ ಮಾಡುವುದು ಸೂಕ್ತ ಎಂದು ಕೆಲವು ಚಿತ್ರಗಳು ನಿರ್ಧರಿಸಿವೆ. ಪ್ರಿಯಾಂಕ ಉಪೇಂದ್ರ ನಟನೆಯ 1980 ಚಿತ್ರ ಒಟಿಟಿ ವೇದಿಕೆ ಮೂಲಕ ರಿಲೀಸ್ ಆಗಲು ಮುಂದಡಿ ಇಟ್ಟಿದೆ.
ಇದನ್ನೂ ಓದಿ : Sandalwood Updates : ಕಿರಾತಕ 2 ಬೇಡ ಎಂದು ಹಣ ಹಿಂದಿರುಗಿಸಿದ ರಾಕಿಂಗ್ ಸ್ಟಾರ್ ಯಶ್
2022ರಲ್ಲಿ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ಚಿತ್ರಗಳು: ಬಹು ನಿರೀಕ್ಷಿತ ಸ್ಟಾರ್ ನಟರ ಚಿತ್ರಗಳಾದ ಕೋಟಿಗೊಬ್ಬ 3, ವಿಕ್ರಾಂತ್ ರೋಣ, ಭಜರಂಗಿ 2, ಬಡವ ರಾಸ್ಕಲ್ ಚಿತ್ರಗಳು ಇನ್ನೂ ಬಿಡುಗಡೆ ಆಗಿಲ್ಲ. ಕೆಲ ಚಿತ್ರಗಳು ಸರಕಾರ ಪ್ರೇಕ್ಷಕರ ವೀಕ್ಷಣೆಯ ನಿರ್ಬಂಧವನ್ನು ತೆಗೆದು ಹಾಕಬಹುದು ಎನ್ನುವ ನಿರೀಕ್ಷೆಯಲ್ಲಿ ರಿಲೀಸ್ ಡೇಟ್ ಘೋಷಣೆ ಮಾಡಿದರೂ, ಸರ್ಕಾರ ನಿರ್ಬಂಧ ಹಿಂದಕ್ಕೆ ಪಡೆಯದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹಾಕಿದ ಪ್ರಸಂಗವೂ ನಡೆದಿದೆ. ಪ್ರೇಕ್ಷಕರ ನಿರ್ಬಂಧದ ಸಡಿಲಿಕೆ ಹಿಂದಕ್ಕೆ ಪಡೆಯಲು ವಿಳಂಬ ಆಗಬಹುದು ಎನ್ನುವ ಕಾರಣಕ್ಕೆ ಸ್ಟಾರ್ ನಟರ ಕೆಲ ಚಿತ್ರಗಳು ಚಿತ್ರದ ರಿಲೀಸ್ ದಿನಾಂಕವನ್ನು 2022ಕ್ಕೆ ಘೋಷಿಸಿವೆ. ಕಬ್ಜ, ಕೆಜಿಎಫ್ 2 ಚಿತ್ರಗಳು 2022ರಲ್ಲಿ ಬಿಡುಗಡೆ ಆಗಲಿವೆ ಎಂದು ಆಯಾ ಚಿತ್ರತಂಡಗಳು ಘೋಷಿಸಿವೆ.