ಕೊಡಗು : ಮಡಿಕೇರಿ ಬಳಿಯ ಮಾಂದಲಪಟ್ಟಿ ಮತ್ತು ಕೋಟೆ ಬೆಟ್ಟಗಳಲ್ಲಿ ಅರಳಿ ನಿಂತಿರುವ ನೀಲಕುರಂಜಿ ಪುಪ್ಪ ರಾಶಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ನೀಲಕುರಂಜಿ ಪುಪ್ಪರಾಶಿ ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ. ಅರಳಿ ನಿಂತ ಪುಷ್ಪ ರಾಶಿ ಮಾಂದಲಪಟ್ಟಿ, ಕೋಟೆ ಬೆಟ್ಟಕ್ಕೆ ಸೊಬಗು ತುಂಬುವ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗೆ ಕಾರಣವಾಗಿದೆ. ಕೊಡಗಿನ ಎರಡು ಬೆಟ್ಟಗಳಲ್ಲಿ ಅರಳಿ ಕಂಗೊಳಿಸುತ್ತಿರುವ ನೀಲಿ ವಣ೯ದ ಕುರಂಜಿ ಹೂವುಗಳು ಸ್ಥಳೀಯ ಜನತೆಯಲ್ಲಿ ಸಂಭ್ರಮವನ್ನು ತಂದಿದೆ. 12 ವಷ೯ಕ್ಕೊಮ್ಮೆ ಅರಳುವ ಪುಪ್ಪ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಸ್ಥಳೀಯರಿಗೆ ಒಂದಷ್ಟು ಆದಾಯ ಹುಟ್ಟಲು ಕಾರಣವಾಗಿದೆ.
ಇದನ್ನೂ ಓದಿ : Explainer : ನೀವು ಎಲ್‌ಪಿಜಿ ಗ್ಯಾಸ್ ಬಳಸುತ್ತಿರಾ ? ಹಾಗಾದರೆ ಪ್ರಮುಖವಾಗಿ ಈ ಸುರಕ್ಷಾ ಕ್ರಮಗಳನ್ನು ಅನುಸರಿಸಲೇಬೇಕು..

ಸಾವಿರಾರು ಜನರಿಂದ ಭೇಟಿ:
ಪ್ರತಿನಿತ್ಯ 4 ರಿಂದ 5 ಸಾವಿರ ಜನ ಮಾಂದಲಪಟ್ಟಿಗೆ ಭೇಟಿ ನೀಡುತ್ತಿದ್ದಾರೆ. ಮಡಿಕೇರಿ, ನಂದಿಮೊಟ್ಟೆಯಿಂದ ಮಾಂದಲಪಟ್ಟಿಗೆ 110 ಜೀಪುಗಳು ಪ್ರವಾಸಿಗರನ್ನು ಕರೆದೊಯ್ಯುತ್ತಿದೆ. ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯಲು 1500 ರೂ. ನಿಗದಿ ಮಾಡಲಾಗಿದೆ. ಪ್ರವಾಸಿಗರಿಂದ ಕೊಡಗಿನ ಹೋಂಸ್ಟೇಗಳು, ಹೋಟೇಲ್ ಗಳಲ್ಲಿ ಚಟುವಟಿಕೆ ಹೆಚ್ಚಿದೆ. ಕೊಡಗಿನ ಮೂಲೆಮೂಲೆಗಳ ಜನರು ಸಹ ನೀಲಕುರಂಜಿ ವೀಕ್ಷಿಸಲು ಬೆಟ್ಟಕ್ಕೆ ತೆರಳುತ್ತಿದ್ದಾರೆ. ರಸ್ತೆ ದುಸ್ಥಿತಿಯ ನಡುವೇ ಜೀಪುಗಳು ಧೂಳೆಬ್ಬಿಸುತ್ತಾ ತಂಡೋಪತಂಡವಾಗಿ ಪ್ರವಾಸಿಗರನ್ನು ಮಾಂದಲಪಟ್ಟಿಗೆ ಕರೆದೊಯ್ಯುತ್ತಿವೆ. ಗ್ರಾಮಸ್ಥರ ಮಾರ್ಗದರ್ಶನದಲ್ಲಿ ಕೋಟೆಬೆಟ್ಟಕ್ಕೂ ಪ್ರವಾಸಿಗರು ಹೂರಾಶಿ ವೀಕ್ಷಿಸಲು ತೆರಳುತ್ತಿದ್ದಾರೆ.

ಪ್ರವಾಸಿಗರಿಗೆ ಭಿನ್ನ ಅನುಭವ :
ಮಡಿಕೇರಿಯಿಂದ ಮಾಂದಲಪಟ್ಟಿಗೆ ತೆರಳುವ ನಿಸಗ೯ ರಮಣೀಯ ರಸ್ತೆಯಲ್ಲಿ ಸಾಗುವುದು ಪ್ರವಾಸಿಗರಿಗೆ ವಿನೂತನ ಅನುಭವ ಆಗುತ್ತಿದೆ. ಡಾಂಬರು ಕಾಣದ ಕಚ್ಚಾ ರಸ್ತೆಯಲ್ಲಿ ಕಣ್ಣುಹಾಯಿಸಿದಷ್ಟು ದೂರ ಕಾಣುವ ಹಸಿರ ನಿಸರ್ಗ ಪ್ರವಾಸಿಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ. ನೀಲಕುರಂಜಿ ಹೂವಿನ ಜೊತೆಗೆ ಮಾಂದಲಪಟ್ಟಿಯ ಮಂಜು ಮುಸುಕಿದ ಹಸಿರ ನಿಸರ್ಗ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತಿದೆ.

ಚಿಗುರಿದ ಪ್ರವಾಸೋದ್ಯಮ:
ಬೆಟ್ಟದ ತಪ್ಪಲಿನ ಗ್ರಾಮಸ್ಥರು ಮಾತ್ರವಲ್ಲದೆ, ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿಗೆ ಆರ್ಥಿಕ ಚೈತನ್ಯ ನೀಡಲು ನೀಲಕುರುಂಜಿ ಕಾರಣ ಆಗಿದೆ. ಕಳೆದ ಒಂದೂವರೆ ವಷ೯ಗಳಿಂದ ಲಾಕ್ ಡೌನ್ ನಿಂದ ಬೇಸತ್ತು ಹೋಗಿದ್ದ ಜನತೆಗೆ ನೀಲಕುರಂಜಿ ಹೂವು ಹೊಸ ಚೈತನ್ಯ ನೀಡಿದೆ.

ಮಾಂದಲಪಟ್ಟಿ ತಪ್ಪಲಿನ ಕಾಲೂರು, ನಂದಿಮೊಟ್ಟೆ, ಗಾಳಿಬೀಡು, ಹಮ್ಮಿಯಾಲ ಮತ್ತಿತರ ಗ್ರಾಮಗಳ ಯುವಕರು ಈ ಹೂವುಗಳ ದೆಸೆಯಿಂದ ಜೀಪು ಬಾಡಿಗೆ ಮೂಲಕ ಹಣ ಎಣಿಸಲು ಕಾರಣವಾಗಿದೆ. 2018ರಲ್ಲಿ ಪ್ರಕೖತ್ತಿ ವಿಕೋಪ ಸಂಭವಿಸಿದ ಬಳಿಕ ಮಾಂದಲಪಟ್ಟಿಗೆ ಜನರನ್ನು ಕರೆದೊಯ್ಯುವ ಜೀಪುಗಳ ನಡುವೆ ಪೈಪೋಟಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿತು. ಅನೇಕ ತಿಂಗಳು ಮಾಂದಲಪಟ್ಟಿಗೆ ಬಾಡಿಗೆ ಜೀಪುಗಳನ್ನೇ ನಿಷೇಧ ಮಾಡಿತು. ಇದರಿಂದ ಜೀಪು ಚಾಲಕರ ಆದಾಯಕ್ಕೆ ಹೊಡೆತ ಬಿದ್ದಿತ್ತು. 2020 ರ ಮಾರ್ಚ್ ಬಳಿಕ ಕೋವಿಡ್ ಲಾಕ್ ಡೌನ್ ನಿಂದಾಗಿ ಕೊಡಗಿಗೆ ಪ್ರವಾಸಿಗರ ಆಗಮನವೂ ಕಡಿಮೆ ಆಯಿತು. ಇದರಿಂದ ಜೀಪು ಮಾಲೀಕರು ಸಹ ಮನೆಯೊಳಗೇ ಕೂರುವಂತಾಯಿತು. ಅಂತೆಯೇ ಮಡಿಕೇರಿ – ಮಾಂದಲಪಟ್ಟಿಯ ಬೆಟ್ಟದ ಹಾಡಿಯಲ್ಲಿದ್ದ ಅಂಗಡಿಗಳಿಗೂ ಲಾಕ್ ಡೌನ್ ಹೊಡೆತದ ಬಿಸಿ ತಟ್ಟಿ ಅವುಗಳೂ ಬಾಗಿಲು ಮುಚ್ಚಿದ್ದವು. ಆದರೆ ಈಗ ಬೆಟ್ಟದಲ್ಲಿ ಅರಳಿದ ನೀಲಕುರಂಜಿ ಜನರ ಜೀವನದಲ್ಲಿ ಹೊಸ ಕನಸು ಅರಳಿಸಿವೆ.