ಮುಂಬಯಿ : ಅಶ್ಲೀಲ ವಿಡಿಯೋ ತಯಾರಿಸಿ ಆ್ಯಪ್ ಗಳಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ.

ಒಟ್ಟು 64 ದಿನಗಳ ಕಾಲ ಜೈಲಿನಲ್ಲಿದ್ದ ಕುಂದ್ರಾ ಅವರಿಗೆ ಸೋಮವಾರ ಬಿಡುಗಡೆ ಭಾಗ್ಯ ಕೂಡಿ ಬಂದಿದೆ. ಅಶ್ಲೀಲ ವೀಡಿಯೋ ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ಪೊಲೀಸರು ರಾಜ್ ಕುಂದ್ರಾ ಸೇರಿದಂತೆ ಇತರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಬಳಿಕ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ರಾಜ್ ಕುಂದ್ರಾ ಅವರಿಗೆ ಕೋರ್ಟ್ ಕೊನೆಗೂ ಜಾಮೀನು ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅಶ್ಲೀಲ ಚಿತ್ರ ತಯಾರಿ ಸಂಬಂಧ ಜುಲೈ 19ರಂದು ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಅವರ ಲ್ಯಾಪ್ಟಾಪ್, ಮೊಬೈಲ್, ಹಾರ್ಡ್ಡಿಸ್ಕ್ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದರು.

ತನ್ನ ವಿರುದ್ಧ ಸಾಕ್ಷಿ ಇಲ್ಲ ಎಂದ ಕುಂದ್ರಾ:
ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಳಿಕ ಜಾಮೀನಿಗೆ ರಾಜ್ ಕುಂದ್ರಾ ಮನವಿ ಸಲ್ಲಿಸಿದ್ದರು. ಈ ವೇಳೆ ಅವರು ತನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು. ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಹೇಳಿಕೆಗಳೇ ಪ್ರಧಾನವಾಗಿದ್ದ ಕಾರಣ ನ್ಯಾಯಾಲಯ ಅವರಿಗೆ ಅವರ ವಾದವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ : Priyanka Upendra : ಪರಮ ಸುಂದರಿಗೆ ಹೆಜ್ಜೆ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ
ಶಿಲ್ಪಾ ಶೆಟ್ಟಿ ಹೇಳಿಕೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಎದುರು ಹೇಳಿಕೆ ನೀಡಿದ್ದ ಶಿಲ್ಪಾ ಶೆಟ್ಟಿ, “ತಾನು ವಿಯಾನ್ ಕಂಪೆನಿಗೆ 2020ರಲ್ಲಿಯೇ ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ರಾಜ್ ಕುಂದ್ರಾ ಅವರ ವ್ಯವಹಾರಗಳ ಬಗ್ಗೆ ನನಗೇನೂ ತಿಳಿದಿರಲಿಲ್ಲ” ಎಂದಿದ್ದರು.
ಅದರ ಜೊತೆಗೆ , “ಗೆಹನಾ ವಸಿಷ್ಠ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ನಾನು ಆ ಬಗ್ಗೆ ವಿಚಾರಿಸಿದ್ದೆ. ಆಕೆ ಮತ್ತು ಕೆಲವರು ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿದ ಕಾರಣ ಬಂಧನಕ್ಕೆ ಒಳಗಾಗಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದ್ದರು.

ಶಿಲ್ಪಾ ಶೆಟ್ಟಿ ಸಂತಸ:
ಕುಂದ್ರಾ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪತ್ನಿ ಶಿಲ್ಪಾ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ”ಕೆಟ್ಟ ಚಂಡಮಾರುತದ ಬಳಿಕ ಸುಂದರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಕಾಮನಬಿಲ್ಲುಗಳೇ ಸಾಕ್ಷಿ” ಎನ್ನುವ ಸಾಲನ್ನು ಹೊಂದಿದ ಚಿತ್ರವನ್ನು ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಘಟನೆಯ ಬಳಿಕ ಶಿಲ್ಪಾ ಶೆಟ್ಟಿ ಅವರು ಪತಿ ಕುಂದ್ರಾಗೆ ವಿಚ್ಛೇದನ ನೀಡುತ್ತಾರೆ ಎನ್ನುವ ವದಂತಿಗೆ ತೆರೆ ಬಿದ್ದಿದೆ.