ಪ್ರತಿಯೊಂದು ಮನೆಯಲ್ಲೂ ಸುಂದರವಾದ ಕೈ ತೋಟ ಮಾಡಿಕೊಳ್ಳುವುದು ಈಗಿನ ಕಾಲದ ಟ್ರೆಂಡ್ ಆಗಿದೆ. ಹೊರಗಡೆಯಿಂದ ತರುವ ತರಕಾರಿ, ಸೊಪ್ಪು, ಹಣ್ಣು ತಾಜಾ ಸಿಗುವುದು ಕಷ್ಟ. ಆದರೆ ಮನೆಯಲ್ಲೇ ಸ್ವಂತ ಕೈ ತೋಟ ಇದ್ದರೆ ಹೊರಗಡೆಯಿಂದ ತರುವ ಸಮಸ್ಯೆಯಿರುವುದಿಲ್ಲ. ಸರಿಯಾದ ಸಮಯಕ್ಕೆ ಗೊಬ್ಬರ ಹಾಕಿದಲ್ಲಿ ಸುಂದರವಾದ ಹಾಗೂ ಆರೋಗ್ಯಕರ ಕೈ ತೋಟ ನಿಮ್ಮದಾಗುತ್ತದೆ. ನೈಸರ್ಗಿಕ ಗೊಬ್ಬರ ನಿಮ್ಮ ಅಂಗೈಯಲ್ಲಿ ಸಿಗುವ ತುಪ್ಪದ ಹಾಗೆ. ಸುಲಭ ಹಾಗೂ ಆರೋಗ್ಯಕರ ಕೈ ತೋಟಕ್ಕೆ ಇಲ್ಲಿದೆ ಸೂಕ್ತ ಗೊಬ್ಬರಗಳ ವಿವರ.
ಬಾಳೆಹಣ್ಣಿನ ಸಿಪ್ಪೆ: ಸಾಮಾನ್ಯವಾಗಿ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ಇರುತ್ತದೆ. ಗುಲಾಬಿ ಹಾಗೂ ತರಕಾರಿ ಗಿಡಗಳನ್ನು ನೆಡುವಾಗ ಬಾಳೆ ಸಿಪ್ಪೆಯನ್ನು ಗಿಡಕ್ಕೆ ಹಾಕಿದಲ್ಲಿ ಒಳ್ಳೆಯ ಗೊಬ್ಬರವಾಗಿ ತಾಜಾ ತರಕಾರಿಯನ್ನು ಪಡೆಯಬಹುದು.

ಕಾಫಿ ಮತ್ತು ಚಹಾ ಪುಡಿ: ಉಪಯೋಗಿಸಿದ ಕಾಫಿ ಮತ್ತು ಚಹಾ ಪುಡಿಯಲ್ಲಿ ನೈಟ್ರೋಜನ್ ಅಂಶ ಹೊಂದಿರುವುದರಿಂದ ಟೊಮೇಟೊ, ಸ್ಟ್ರಾಬೆರಿಯಂಥ ಹುಳಿ ಅಂಶ ಇರುವ ಗಿಡಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಈ ಪುಡಿಯನ್ನು ನೀರಿಗೆ ಕಲಸಿ ಗಿಡಗಳ ಬುಡಕ್ಕೆ ಹಾಕಬಹುದು.

ಮೊಟ್ಟೆ ಕವಚ: ಮೊಟ್ಟೆ ಕವಚದಲ್ಲಿ 93% ಕ್ಯಾಲ್ಸಿಯಂ ಅಂಶ ಇರುವುದರಿಂದ ಆರೋಗ್ಯಕರ ಗಿಡಗಳನ್ನು ಬೆಳೆಸಬಹುದು. ಮೊಟ್ಟೆ ಕವಚವನ್ನು ಪುಡಿಮಾಡಿ ಗಿಡದ ಬುಡಕ್ಕೆ ಹಾಕಬೇಕು. ಇದರಿಂದ ತಾಜಾ ತರಕಾರಿಗಳನ್ನು ಪಡೆಯಬಹುದು. ಟೊಮೆಟೊ ಮತ್ತು ಕಾಳು ಮೆಣಸಿನ ಗಿಡಕ್ಕೆ ಮೊಟ್ಟೆಯ ಕವಚದ ಗೊಬ್ಬರ ಹಾಕಬಹದು. ಮೊಟ್ಟೆ ಕವಚದಲ್ಲಿ ಇರುವ ಅಂಶ ಸುಣ್ಣದಲ್ಲಿಯೂ ಇರುವುದರಿಂದ ಮೊಟ್ಟೆ ಉಪಯೋಗಿಸದೆ ಇರುವವರು ಸುಣ್ಣವನ್ನು ಸಹ ಬಳಕೆ ಮಾಡಿಕೊಳ್ಳಬಹುದು.

ಅಡುಗೆಗೆ ಬಳಸಿದ ನೀರು: ತರಕಾರಿ ಹಾಗೂ ಸೊಪ್ಪನ್ನು ಬೇಯಿಸಿದ ನೀರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಠಿಕ ಅಂಶ ಇರುತ್ತದೆ. ಆಲೂಗೆಡ್ಡೆ ಬೇಯಿಸಿದ ನೀರು, ಮೊಟ್ಟೆ ಅಥವಾ ತರಕಾರಿ ಬೇಯಿಸಿದ ನೀರನ್ನು ತಣ್ಣಗಾದ ಮೇಲೆ ಗಿಡಗಳಿಗೆ ಹಾಕಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಗ್ರೀನ್ ಟೀ: ಬಳಸಿದ ಗ್ರೀನ್ ಟೀ ಪುಡಿ ಅಥವಾ ಗ್ರೀನ್ ಟೀ ಬ್ಯಾಗ್‌ಗಳನ್ನು 4 ವಾರಗಳಿಗೊಮ್ಮೆ ಗಿಡಗಳಿಗೆ ನೀಡಬೇಕು. ಇದು ಉತ್ತಮ ಗೊಬ್ಬರವಾಗಿದ್ದು ಉತ್ತಮ ಫಲ ಸಿಗುತ್ತದೆ.

ಕೂದಲು: ಮಾನವನ ಕೂದಲಿನಲ್ಲಿ ನೈಟ್ರೋಜನ್ ಅಂಶ ಇರುವುದರಿಂದ ಇದು ಗಿಡಗಳಿಗೆ ಒಳ್ಳೆಯ ನೈಸರ್ಗಿಕ ಗೊಬ್ಬರ. ಕೂದಲುಗಳನ್ನು ಗಿಡದ ಬುಡಗಳಿಗೆ ಹಾಕಬೇಕು. ನಿಮ್ಮ ಬಾಚಣಿಗೆಯಲ್ಲಿ ಉಳಿದ ಕೂದಲು ಅಥವಾ ಬ್ಯೂಟಿ ಸಲೂನ್‌ನಲ್ಲಿ ಸಹ ಕೇಳಿ ಪಡೆಯಬಹುದು.

ಕುದುರೆಯ ಹುರುಳಿ ಹಿಂಡಿ: ಕುದುರೆಗೆ ಹಾಕುವ ಹುರುಳಿ ಪಶು ಆಹಾರವನ್ನು ಗೊಬ್ಬರವಾಗಿ ಬಳಸಬಹುದು. ಮಣ್ಣಿನ ಜೊತೆ ಕುದುರೆ ಆಹಾರವನ್ನು ಮಿಶ್ರಣಮಾಡಿ ಗಿಡಕ್ಕೆ ಮೇಲ್ಪದರಕ್ಕೆ ಹಾಕಬಹುದು. ಇದು ಒಂದು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುತ್ತದೆ. .

ಬೆಂಕಿಕಡ್ಡಿ: ಬಳಕೆ ಮಾಡಿದ ಬೆಂಕಿಕಡ್ಡಿಯಲ್ಲಿ ಮೆಗ್ನೀಶಿಯಮ್ ಅಂಶ ಇರುವುದರಿಂದ ಗಿಡದ ಸುತ್ತ ಹಳ್ಳ ಮಾಡಿ ಕಡ್ಡಿಗಳನ್ನು ಹಾಕಬಹುದು ಅಥವಾ ಕಡ್ಡಿಗಳನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಗಿಡದ ಬುಡಕ್ಕೆ ಹಾಕಬಹುದು.

ಅಕ್ವೇರಿಯಂ ನೀರು: ಮನೆಯಲ್ಲಿ ಅಕ್ವೇರಿಯಂ ಇದ್ದರೆ ವಾರಕ್ಕೊಮ್ಮೆ ಮೀನುಗಳನ್ನು ಸ್ವಚ್ಛಗೊಳಿಸಿ ಅಕ್ವೇರಿಯಂನಲ್ಲಿ ಉಳಿದ ನೀರನ್ನು ಗಿಡಕ್ಕೆ ಹಾಕಬಹುದು. ಇದರಿಂದ ಧೀರ್ಘಕಾಲದವರೆಗೂ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ. ಸತ್ತ ಮೀನಿನ ದೇಹವನ್ನುಕೂಡ ಗಿಡದ ಬುಡಕ್ಕೆ ಹಾಕುವುದರಿಂದ ಗಿಡಗಳಿಗೆ ಗೊಬ್ಬರವಾಗುತ್ತದೆ.

ಹಾಲಿನ ಪುಡಿ: ಹಾಲಿನಪುಡಿ ಮನುಷ್ಯರಿಗಷ್ಟೇ ಅಲ್ಲದೆ ಗಿಡಗಳಿಗೂ ಆರೋಗ್ಯಕರ. ಹಾಲಿನ ಪುಡಿಯನ್ನು ಮಣ್ಣಿನ ಜೊತೆ ಮಿಶ್ರಣ ಮಾಡಿ ಗಿಡಗಳಿಗೆ ಹಾಕಬೇಕು. ಇದರಿಂದ ಕ್ಯಾಲ್ಸಿಯಂ ಅಂಶ ಮಣ್ಣಿನ ಜೊತೆ ಮಿಶ್ರವಾಗಿ ಗಿಡಗಳು ಆರೋಗ್ಯಕರ ರೀತಿಯಲ್ಲಿ ಬೆಳೆಯುತ್ತದೆ.

ಅಂಗಡಿಯಲ್ಲಿ ಸಿಗುವ ರಾಸಾಯನಿಕ ಗೊಬ್ಬರಗಳಿಗಿಂತ ನೈಸರ್ಗಿಕ ಅಥವಾ ಮನೆಯಲ್ಲೇ ಸಿಗುವ ಗೊಬ್ಬರಗಳನ್ನು ಗಿಡಗಳಿಗೆ ಹಾಕುವುದರಿಂದ ಕೈತೋಟವು ಸಂವೃದ್ದಿಯಾಗುವುದಲ್ಲದೇ ಆರೋಗ್ಯಕ್ಕೂ ಹಿತವಾಗಿರುತ್ತದೆ.