ಬೆಂಗಳೂರು : ಬಂಗಾಳಿ ನಟಿ ನೈನಾ ಗಂಗೂಲಿ ಅವರು ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಿ2 ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ಪ್ರಣಯಂ ಚಿತ್ರದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ನೈನಾ ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ. ಸದ್ಯ ನಾನು ಸ್ಕ್ರಿಪ್ಟ್ ಓದುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. 15 ದಿನಗಳ ಶೆಡ್ಯೂಲ್ ನೊಂದಿಗೆ ಇನ್ನೊಂದೆರಡು ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದೇನೆ” ಎಂದು ನೈನಾ ಗಂಗೂಲಿ ಹೇಳಿದ್ದಾರೆ.

ನೈನಾಗೆ ಭಾಷೆಯ ಸವಾಲು:
ಬಂಗಾಳಿ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನೈನಾ ಗಂಗೂಲಿ ಹೆಸರು ಮಾಡಿದ್ದಾರೆ. ನೈನಾ ಕೆಲವು ಸಿನಿಮಾಗಳ ಜೊತೆ ವೆಬ್ ಸೀರಿಸ್‌ಗಳಲ್ಲೂ ಕಾಣಿಸಿಕೊಂಡಿದ್ದು ಅವರಿಗೆ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುವುದು ಸವಾಲಾಗಿದೆ. “ನಾನು ಮೂಲತಃ ಬಂಗಾಳಿಯಾಗಿದ್ದು, ದಕ್ಷಿಣ ಭಾರತದ ಭಾಷೆಗಳು ನನಗೆ ಸವಾಲಾಗಿವೆ. ಈ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಅನುಭವ ಸಿಗಲಿದೆ. ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ರಾಜವರ್ಧನ್ ಎಲ್ಲರೂ ಸಂಭಾಷಣೆಗಳಿಗೆ ನನಗೆ ಸಹಾಯ ಮಾಡುತ್ತಿದ್ದಾರೆ. ಪ್ರಣಯಂ ಒಂದು ತಾಜಾ ಕಥೆಯಾಗಿದೆ. ಇದು ಕೌಟುಂಬಿಕ ಸಿನೆಮಾವಾಗಿದ್ದು ಪ್ರತಿಭೆ ಹೊರಹಾಕಲು ಉತ್ತಮ ಅವಕಾಶವಿದೆ” ಎಂದು ನೈನಾ ತಿಳಿಸಿದ್ದಾರೆ.
ಇದನ್ನೂ ಓದಿ : SIIMA Awards 2021 Winners; ಸೈಮಾದಲ್ಲಿ ಮಿಂಚಿದ ‘ಯಜಮಾನ ‘
ರಾಮ್ ಗೋಪಾಲ್ ವರ್ಮಾ ಅವರ ಗರಡಿಯಲ್ಲಿ ಬೆಳೆದ ನೈನಾ ಆರ್ಜಿವಿ ಅವರಿಂದಾಗಿ ಇಂದು ನಾನು ಇಷ್ಟು ದೂರ ಸಾಗಿ ಬಂದಿದ್ದೇನೆ ಎನ್ನುತ್ತಾರೆ. ಐದು ವರ್ಷಗಳ ಹಿಂದೆ ಬಿಡುಗಡೆಯಾದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ತೆಲುಗು ಚಿತ್ರ ವಂಗವೀಟಿ ಮೂಲಕ ನೈನಾ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅವರು ಸಾಕಷ್ಟುಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಕೊಳ್ಳೆ ಹೊಡೆಯುವ ಯತ್ನ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮ ಅವರ ತಂಡ ಶಾಲೆಯಿದ್ದಂತೆ. ಅವರು ಹೊಸಬರಿಗೆ ಅವಕಾಶಗಳನ್ನು ನೀಡುತ್ತಾರೆ. ಸಿನಿಮಾ ಹಿನ್ನೆಲೆಯಿಲ್ಲದ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ. ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿವೆ. ಕೆಲವು ವಾಕ್ಯಗಳಿಗೆ ಅವರನ್ನು ಸೀಮಿತಗೊಳಿಸುವುದು ಕಷ್ಟ. ಅವರ ಮಾರ್ಗದರ್ಶನದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ, ಎಂದು ಹೆಮ್ಮೆಯಿಂದ ನೈನಾ ಗಂಗೂಲಿ ಹೇಳಿಕೊಳ್ಳುತ್ತಾರೆ. ಕಳೆದ ವರ್ಷ ಆರ್ಜಿವಿ ನಿರ್ದೇಶನದ ಬ್ಯೂಟಿಫುಲ್: ಏನ್ ಓಡ್ ಟು ರಂಗೀಲಾ ಎಂಬ ಚಿತ್ರದಲ್ಲಿ ನೈನಾ ಕಾಣಿಸಿಕೊಂಡಿದ್ದರು. ಆ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಅವರು ನಟಿಸಿಲ್ಲ. ಈಗ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ಪರಮೇಶ್ ನಿರ್ಮಾಪಕ:
ಪ್ರಣಯಂ ಚಿತ್ರಕ್ಕೆ ಪರಮೇಶ್ ಅವರು ಬಂಡವಾಳ ಹೂಡಿದ್ದಾರೆ. ಈ ಹಿಂದೆ ಅವರು ಅಂಬಾರಿ, ಪಲ್ಲಕ್ಕಿ, ಪಾರಿಜಾತ, ಓ ಗುಲಾಬಿ, ಗಣಪ, ಕರಿಯ 2 ಚಿತ್ರಗಳ ನಿರ್ಮಾಣ ಮಾಡಿದ್ದರು. ಬಿಚ್ಚುಗತ್ತಿ ಚಿತ್ರದ ನಂತರ ನಟ ರಾಜವರ್ಧನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ದತ್ತಾತ್ರೇಯ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕುತ್ತಿದ್ದಾರೆ. ಪ್ರಣಯಂ ಮೂಲಕ ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಕನ್ನಡ ಚಿತ್ರಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣ ಇರಲಿದೆ.