ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಕ್ಲಾಸಿಕ್ ಹಿಟ್ ಚಿತ್ರ ‘ಬಂಧನ’ ಚಿತ್ರದ ಮುಂದುವರೆದ ಭಾಗ ‘ಬಂಧನ 2’ ಸಿನಿಮಾ, ತೆರೆಯ ಮೇಲೆ ಬರಲಿದ್ದು ಡೆಡ್ಲಿ ಸೋಮ ಖ್ಯಾತಿಯ “ಆದಿತ್ಯ” ನಾಯಕ ನಟರಾಗಿ ತೆರೆಯ ಮೇಲೆ ಮಿಂಚಲಿದ್ದಾರೆ.
ಆದಿತ್ಯ ವಿಷ್ಣುವರ್ಧನ್
1984ರಲ್ಲಿ ತೆರೆ ಕಂಡ ‘ಬಂಧನ’ ಚಿತ್ರ ನಿರ್ದೇಶಿಸಿದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಲಿರುವುದು ವಿಶೇಷ ಆಗಿದೆ. ಸಿನಿಮಾದ ನಾಯಕ ನಟನಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಗ ಆದಿತ್ಯ ನಟಿಸುವುದು ಪಕ್ಕಾ ಆಗಿದ್ದು ನಾಯಕಿಯ ಬಗ್ಗೆ ಇನ್ನಷ್ಟೇ ವಿವರ ಹೊರ ಬೀಳಬೇಕಿದೆ. ‘ಬಂಧನ 2 ‘ಸಿನಿಮಾವನ್ನು ಇಂದಿನ ಕಾಲಘಟಕ್ಕೆ ಅನುಗುಣವಾಗಿ ಮೇಕಿಂಗ್ ಮಾಡಲಾಗುತ್ತಿದೆ. ಸಿನಿಮಾಕ್ಕೆ ಹಿರಿಯ ನಿರ್ದೇಶಕ, ಛಾಯಾಗ್ರಾಹಕ ಅಣಜಿ ನಾಗರಾಜ್ ಬಂಡವಾಳ ಹೂಡಲಿದ್ದಾರೆ.
ಕ್ಲಾಸಿಕ್ ಸಿನಿಮಾವಾಗಿದ್ದ ಬಂಧನ:
ಸಿನಿಮಾ ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು ಎಂದೇ ಪ್ರಸಿದ್ಧವಾಗಿದೆ.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನ, ನಿರ್ಮಾಣ ಮಾಡಿದ್ದ ಈ ಸಿನಿಮಾ ಆಗ ಗಳಿಕೆಯಲ್ಲೂ ದಾಖಲೆ ಬರೆದಿತ್ತು. ಈ ಚಿತ್ರ ಹಲವಾರು ಚಿತ್ರಮಂದಿರಗಳಲ್ಲಿ ವರ್ಷಾನುಗಟ್ಟಲೆ ಓಡಿತ್ತು. ಸಿನಿಮಾ ಬಿಡುಗಡೆ ಆಗಿ 37 ವರ್ಷಗಳ ಬಳಿಕ ಇದೀಗ ಸಿನಿಮಾದ ಮುಂದುವರೆದ ಭಾಗ ಬರುತ್ತಿರುವುದು ಸಿನಿಮಾಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಬಂಧನ ಚಿತ್ರದಲ್ಲಿ ವಿಷ್ಣುವರ್ಧನ್ ಡಾ. ಹರೀಶ್ ಆಗಿ, ಸುಹಾಸಿನಿ ನಂದಿನಿ ಆಗಿ, ಜೈಜಗದೀಶ್ ಅವರು ಬಾಲು ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರಗಳು ಇಂದಿಗೂ ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ. ವಿಷ್ಣುವರ್ಧನ್ ಅವರು ಭಗ್ನ ಪ್ರೇಮಿಯಾಗಿ ಅಮೋಘ ನಟನೆ ಮಾಡಿದ್ದರು. ಈ ಚಿತ್ರದ ಮೂಲಕ ವಿಷ್ಣುವರ್ಧನ್ ಅವರು ಆಕ್ಷನ್ ಚಿತ್ರದಿಂದ ರೋಮ್ಯಾಂಟಿಕ್ ಚಿತ್ರದ ಕಡೆಗೆ ಹೊರಳಿ ತಮ್ಮ ಛಾಪನ್ನು ಮೂಡಿಸುವಲ್ಲಿ ಸಫಲರಾಗಿದ್ದರು. ಈ ಸಿನಿಮಾದ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದು ಎವರ್ ಗ್ರೀನ್ ಹಾಡುಗಳು ಎನಿಸಿಕೊಂಡಿವೆ.ಈ ಸಿನಿಮಾದ ಯಶಸ್ಸಿನ ಬಳಿಕ ಸುಹಾಸಿನಿ ಮತ್ತು ವಿಷ್ಣುವರ್ಧನ್
ಜೊಡಿ ಹಲವಾರು ಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡಿತು.
ಅಭಿಮಾನಿಗಳಿಂದ ಹೆಚ್ಚಿನ ನೀರಿಕ್ಷೆ: ಈಗ ಬಂಧನದ ಮುಂದುವರೆದ ಭಾಗವನ್ನು ರಾಜೇಂದ್ರಸಿಂಗ್ ಬಾಬು ಅವರು ಹೇಗೆ ಮೇಕಿಂಗ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಬಂಧನ ಚಿತ್ರದ ಬಗ್ಗೆ ಸಿನಿಮಾಪ್ರಿಯರು ತಮ್ಮದೇ ಆದ ಅಭಿಪ್ರಾಯ ಹೊಂದಿರುವ ಕಾರಣ ಆ ನಿರೀಕ್ಷೆಯನ್ನು ಮುಟ್ಟುವುದು ನಿರ್ದೇಶಕರಿಗೆ ಸವಾಲಾಗಿ ಪರಿಣಮಿಸಲಿದೆ. ಸದ್ಯ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಜ ವೀರ ಮದಕರಿ’ ಸಿನಿಮಾವನ್ನುಅರ್ಧಕ್ಕೆ ನಿಲ್ಲಿಸಿದ್ದು ಬಂಧನ 2 ಸಿನಿಮಾದ ಬಳಿಕ ಆ ಚಿತ್ರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
‘ಡೆಡ್ಲಿ ಸೋಮ’ ಚಿತ್ರದ ಮೂಲಕ ಹೆಸರಾದ ಆದಿತ್ಯ ಅವರ ಇತ್ತೀಚಿನ ಚಿತ್ರ ‘ಮುಂದುವರೆದ ಅಧ್ಯಾಯ’ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಚಿತ್ರದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಕೇಳಿ ಬಂದಾಗ ಯೂಟ್ಯೂಬ್ ಸಿನಿಮಾ ವಿಮರ್ಶಕರ ಮೇಲೆ ಆದಿತ್ಯ ಗರಂ ಆಗಿದ್ದರು. ಸಿನಿಮಾ ಸೋಲಲು ಯೂಟ್ಯೂಬ್ ವಿಮರ್ಶಕರೇ ಕಾರಣ ಎಂದು ಕೋಪದಿಂದ ಮಾತನಾಡಿ ವಿವಾದ ಉಂಟು ಮಾಡಿದ್ದರು. ಈ ಚಿತ್ರ ಅಲ್ಲದೇ ಎಸ್.ನಾರಾಯಣ್ ಅವರ ಹೆಸರಿಡದ ಸಿನಿಮಾದಲ್ಲಿ ಆದಿತ್ಯ ನಟಿಸುತ್ತಿದ್ದಾರೆ.