ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ‘1980’ನ್ನು ಒಟಿಟಿ ಮೂಲಕ ಅಕ್ಟೋಬರ್ 15 ರಂದು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಮಹಾಮಾರಿ ಕರೋನ ಕಾರಣದಿಂದ ಪೂರ್ಣಪ್ರಮಾಣದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಚಿತ್ರಪ್ರದರ್ಶನಕ್ಕೆ ಸರಕಾರ ಅವಕಾಶ ಕಲ್ಪಿಸದೆ ಇರುವ ಕಾರಣ ‘ನಮ್ಮ ಫ್ಲಿಕ್ಸ್’ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ಹೆಜ್ಜೆ ಇಟ್ಟಿದೆ.
ಡಿಜಿಟಲ್ ಬಿಡುಗಡೆ ಮುಂದಾದ ಚಿತ್ರತಂಡ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಉಪೇಂದ್ರ, “1980 ಚಿತ್ರವನ್ನು ನಾಲ್ಕು ತಿಂಗಳ ಹಿಂದೆಯೇ ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿದೆ. ನಾವು ಚಿತ್ರಮಂದಿರ ಶೇ.100 ಸೀಟು ಸಾಮರ್ಥ್ಯದೊಂದಿಗೆ ತೆರೆಯಲು ಸಾಕಷ್ಟು ಸಮಯದಿಂದ ಕಾಯುತ್ತಿದ್ದೆವು. ಆದರೆ ಥಿಯೇಟರ್ ನಲ್ಲಿ ಸಂಪೂರ್ಣ ಪ್ರೇಕ್ಷಕರ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುವುದು ಸದ್ಯದ ಸ್ಥಿತಿಯಲ್ಲಿ ಸಂಶಯವಾಗಿರುವ ಕಾರಣ ಚಿತ್ರವನ್ನು ಡಿಜಿಟಲ್ ಬಿಡುಗಡೆಯೊಂದಿಗೆ ಮುಂದಕ್ಕೆ ಹೋಗಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಕಾದಂಬರಿಗಾರ್ತಿಯ ಪಾತ್ರದಲ್ಲಿ ಪ್ರಿಯಾಂಕಾ
ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಕಾದಂಬರಿಗಾರ್ತಿಯ ಪಾತ್ರ ಮಾಡಿದ್ದಾರೆ. ಚಿತ್ರದ ಟೈಟಲ್ 1980 ಎಂದು ಇರುವ ಕಾರಣ ಇದಕ್ಕೆ ಹೊಂದಿಕೆ ಆಗುವಂತೆ ರೆಟ್ರೊ ಲುಕ್ ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ‘ಎ ಡೆಮನ್ಸ್ ಎರಾ’ ಎನ್ನುವ ಶೀರ್ಷಿಕೆಯನ್ನು ಚಿತ್ರಕ್ಕೆ ನೀಡಲಾಗಿದೆ. ಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ರಾಜ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ, ಜೀವ ಆಂಟೋನಿ ಛಾಯಾಗ್ರಹಣವಿದೆ.
ಪೂರ್ಣಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಸರಕಾರ ಅವಕಾಶ ನೀಡದೆ ಇರುವ ಕಾರಣ ಕನ್ನಡದ ಹಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿವೆ. ಕರೋನ ಎರಡನೇ ಅಲೆಯ ಬಳಿಕ ಚಿತ್ರಮಂದಿರಗಳಲ್ಲಿ ಸೀಟು ಸಾಮರ್ಥ್ಯದ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುವ ಕಾರಣ ಬೆರಳೆಣಿಕೆಯ ಚಿತ್ರಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ.

ಸಾಲು ಸಾಲು ಚಿತ್ರದಲ್ಲಿ ಪ್ರಿಯಾಂಕಾ ಬ್ಯುಸಿ:
ಈ ಚಿತ್ರ ಅಲ್ಲದೇ ಪ್ರಿಯಾಂಕಾ ಉಪೇಂದ್ರ ಅವರು, ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವತಾರ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇದರ ಜೊತೆಗೆ ಪ್ರಿಯಾಂಕಾ ಉಪೇಂದ್ರ ಅವರು ತ್ರಿವಿಕ್ರಮ ರಘು ನಿರ್ದೇಶನದ ಟೈಟಲ್ ಇಡದ ಹೊಸ ಚಿತ್ರದಲ್ಲಿ ‘ಡಿಟೆಕ್ಟಿವ್ ತೀಕ್ಷ್ಣ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದನ್ನೂ ಓದಿ : Second puc result 2021; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಗೌತಮ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಶ್ರೀದೇವಿ ಕ್ರಿಯೇಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದ್ದು ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರಕ್ಕೆ ಮನು ದಾಸಪ್ಪ ಛಾಯಾಗ್ರಹಣ ಇರಲಿದೆ. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಉಪ್ಪಿನಂಗಡಿ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.

ಬಂಗಾಳ ಮೂಲದ ಪ್ರಿಯಾಂಕಾ ಉಪೇಂದ್ರ ಅವರು H2O ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ ಮಲ್ಲ ‘ ಚಿತ್ರದಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಹಾಕಿದರು. ಸೂಪರ್ ಸ್ಟಾರ್ ಉಪೇಂದ್ರ ಅವರನ್ನು ಮದುವೆಯಾದ ಬಳಿಕವೂ ಪ್ರಿಯಾಂಕ ನಟನೆಯನ್ನು ಮುಂದುವರಿಸಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗೃಹಿಣಿ, ಪೊಲೀಸ್ ಅಧಿಕಾರಿ ಸೇರಿದಂತೆ ಹಲವು ಪಾತ್ರಗಳಲ್ಲಿ ಅವರು ಅದ್ಬುತವಾಗಿ ನಟಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: SIIMA Awards 2021 Winners; ಸೈಮಾದಲ್ಲಿ ಮಿಂಚಿದ ‘ಯಜಮಾನ ‘