ನವದೆಹಲಿ : ಗುಜರಾತ್ ಬಳಿಕ ಈಗ ಪಂಜಾಬ್ ಸರದಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರಸಿಂಗ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿದೆ. ಪಕ್ಷದೊಳಗಿನ ಸುಧೀರ್ಘ ಆತಂರಿಕ ಕಚ್ಚಾಟದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಮರೇಂದ್ರ ಸಿಂಗ್ ಅವರನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಂಡಿದೆ.
ಹೈಕಮಾಂಡ್ ಸೂಚನೆ ಮೇರೆ ನಿನ್ನೆ ಕ್ಯಾಪ್ಟನ್ ಅಮರೇಂದ್ರಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂದು ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿದ್ದು ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕ್ಯಾಪ್ಟನ್ ಅಮರೇಂದ್ರ ಸಿಂಗ್ ಅವರಿಂದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತು ರಾಜೀನಾಮೆಯ ಹಿಂದಿನ ಉದ್ದೇಶಗಳು ಏನಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಕಾರಣದಿಂದ ಈ ಕೆಳಗೆ ಅಮರೇಂದ್ರ ಸಿಂಗ್ ರಾಜೀನಾಮೆಯ ಹಿಂದಿನ ಐದು ಕಾರಣಗಳನ್ನು ವಿವರಿಸಲಾಗುತ್ತಿದೆ.

ಡ್ರಗ್ಸ್ ವಿರುದ್ಧ ಇಲ್ಲ ಕಠಿಣ ಕ್ರಮ
ಪಂಜಾಬ್ ಅಂದರೆ ಅದು ಡ್ರಗ್ಸ್ ರಾಜ್ಯ ಎನ್ನುವ ಮಟ್ಟಿಗೆ ಕುಖ್ಯಾತಿ ಪಡೆದಿದೆ. ಪಂಜಾಬ್ ನಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ತರುವ ಭರವಸೆ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಅಧಿಕಾರಕ್ಕೆ ನಾಲ್ಕು ವರ್ಷಗಳು ಕಳೆದರೂ ಯಾವುದೇ ದಿಟ್ಟ ಕ್ರಮಗಳು ಸರ್ಕಾರದಿಂದ ತೆಗೆದುಕೊಂಡಿರಲಿಲ್ಲ. ಜೊತೆಗೆ ಪವಿತ್ರ ಸಿಖ್ ಪುಸ್ತಕ ಗುರು ಗ್ರಂಥದ ಪುಟಗಳನ್ನು ಹರಿದು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳನ್ನು ಬಂಧಿಸಿರಲಿಲ್ಲ ಈ ಎರಡು ಪ್ರಕಣಗಳು ಚುನಾವಣೆಯಲ್ಲಿ ಮುಳುವಾಗಬಹುದು ಎಂದು ಕಾಂಗ್ರೆಸ್ ನಿರೀಕ್ಷೆ ಮಾಡಿದೆ.

ಶಾಸಕರ ಭೇಟಿಯಾಗದ ಸಿಎಂ
ಶಾಸಕರ ಭೇಟಿಗೆ ಅವಕಾಶ ನೀಡುತ್ತಿರಲಿಲ್ಲ ಎನ್ನುವ ಆರೋಪ ಕೂಡಾ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಮೇಲಿದೆ ಇದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಕೆಲವು ಸೀಮಿತ ವ್ಯಕ್ತಿಗಳು ಮಾತ್ರ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಅವರನ್ನು ಸುತ್ತುವರಿದುಕೊಂಡಿದ್ದರು ಅವರು ಶಾಸಕರ ಭೇಟಿಗೆ ಅವಕಾಶ ನೀಡುತ್ತಿರಲಿಲ್ಲ ಎನ್ನುವ ಆರೋಪ ಇತ್ತು. ಇದಾದ ಬಳಿಕ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಚಂಡೀಗಢದಲ್ಲಿರುವ ಸಿಎಂ ಕಚೇರಿ ಬಿಟ್ಟು ತಮ್ಮ ಫಾರ್ಮ್ ಹೌಸ್ ಸೇರಿಕೊಂಡರು ಇದರಿಂದ ಶಾಸಕರು ಮತ್ತು ಸಿಎಂ ನಡುವಿನ ಅಂತರ ಹೆಚ್ಚಾಗಿ ಶಾಸಕು ಬಂಡೇಳುವಂತಾಯಿತು.
ಅಧಿಕಾರಗಳ ಕೈಯಲ್ಲಿ ಸರ್ಕಾರ
ಕ್ಯಾಪ್ಟನ್ ಅಮರೇಂದ್ರ ಸಿಂಗ್ ನೇತೃತ್ವದ ಸರ್ಕಾರ ಬಹುತೇಕ ಅಧಿಕಾರಿಗಳಿಂದ ನಿಯಂತ್ರಣಗೊಳ್ಳುತ್ತಿತ್ತು ಎನ್ನಲಾಗಿದೆ. 2017 ಮಾರ್ಚ್‌ನಲ್ಲಿ ಅಮರೇಂದ್ರ ಅಧಿಕಾರ ವಹಿಸಿಕೊಂಡ ಕೂಡಲೇ 1983 ರ ಬ್ಯಾಚ್ ನ ಐಎಎಸ್ ಅಧಿಕಾರಿಯನ್ನು ಸುರೇಶ್ ಕುಮಾರ್ ಅವರನ್ನು ತಮ್ಮ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು, ಇದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಯ ಹುದ್ದೆಗೆ ಸಮನಾಗಿತ್ತು. ಈ ನೇಮಕಾತಿಯನ್ನು ಹೈಕೋರ್ಟ್ ರದ್ದುಗೊಳಿಸಿತು. ಹೈಕೋರ್ಟ್ ಆದೇಶದ ಬಳಿಕ ಸುರೇಶ್ ಕುಮಾರ್ ರಾಜೀನಾಮೆ ನೀಡಿದರು, ಆದರೆ ಸಿಎಂ ಅಮರೇಂದ್ರ ಸಿಂಗ್ ಮಾತ್ರ ಅವರ ರಾಜೀನಾಮೆಯನ್ನು ಸ್ವೀಕರಿಸಲು ಸಿದ್ದರಿರಲಿಲ್ಲ. ಹೈಕೋರ್ಟ್ ತೀರ್ಪಿನ ವಿರುದ್ಧ ಅಮರೇಂದ್ರ ಸಿಂಗ್ ಸರ್ಕಾರ ಮೇಲ್ಮನವಿ ಸಲ್ಲಿಸಿತು. ಸುರೇಶ್ ಕುಮಾರ್ ಪಂಜಾಬ್ ಶಕ್ತಿ ಕೇಂದ್ರವಾಗಿ ಬದಲಾದರು. ಸುರೇಶ್ ಕುಮಾರ್ ಶಾಸಕರ ಮಾತಿಗೆ ಕಿಮ್ಮತ್ತೂ ಕೊಡುತ್ತಿರಲಿಲ್ಲ ಇದು ಅಸಮಧಾನಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.
ಸಮೀಕ್ಷೆಗಳು
2022 ರಲ್ಲಿ ಚುನಾವಣೆ ಹಿನ್ನಲೆ ಕಾಂಗ್ರೆಸ್ ಖಾಸಗಿ ಕಂಪನಿಗಳ ಮೂಲಕ ಸಮೀಕ್ಷೆಗಳನ್ನು ನಡೆಸಿತ್ತು. ಸರ್ವೆಯಲ್ಲಿ ಸರ್ಕಾರದ ಮೇಲೆ ಜನರ ಅಭಿಪ್ರಾಯ ಮತ್ತು ಸಿಎಂ ಮೇಲಿನ ಜನಪ್ರಿಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯ್ತು. ಸಮೀಕ್ಷೆಯಲ್ಲಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಜನಪ್ರಿಯತೆ ಕಳೆದುಕೊಂಡಿದ್ದು ಅವರ ರಾಜೀನಾಮೆಗೆ ಕಾರಣವಾಯ್ತು ಎಂದು ವಿಶ್ಲೇಷಿಸಲಾಗಿದೆ.

ಅಂಕಿ ಆಟ
ಪಂಜಾಬ್ ಕಾಂಗ್ರೆಸ್ ಪ್ರದೇಶ ಕಮಿಟಿ ಅಧ್ಯಕ್ಷ ನವಜೋತ್ ಸಿಧು ನೇತೃತ್ವದಲ್ಲಿ ಭಿನ್ನಮತೀಯ ಶಾಸಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಯಿತು. ಇದಕ್ಕೆ ಸಚಿವರಾದ ಟ್ರಿಪ್ಟ್ ರಾಜೇಂದ್ರ ಸಿಂಗ್ ಬಾಜ್ವಾ, ಸುಖಬಿಂದರ್ ಸರ್ಕಾರಿಯಾ ಮತ್ತು ಸುಖಜಿಂದರ್ ರಾಂಧವಾ ಸಾಥ್ ನೀಡಿದ್ದರು. ಇವರು ಶಾಸಕರನ್ನು ಕ್ಯಾಪ್ಟನ್ ಅಮರೇಂದ್ರ ಸಿಂಗ್ ವಿರುದ್ಧ ನಿಲ್ಲಿಸಿದರು. ಈ ಶಾಸಕರು ಪಕ್ಷದ ಹೈಕಮಾಂಡ್ ನಾಯಕರಿಗೆ ಬಹಿರಂಗವಾಗಿ ಪತ್ರ ಬರೆಯಲು ಆರಂಭಿಸಿದರು. ಮತ್ತು ಎರಡು ಬಣಗಳು ಒಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎನ್ನುವ ಸಂದೇಶ ರವಾನಿಸಿದರು. ಚುನಾವಣೆ ಹೊಸ್ತಿಲಿನಲ್ಲಿ ಹೆಚ್ಚು ವಿವಾದ ಮಾಡಿಕೊಳ್ಳದ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವ ದೃಷ್ಟಿಯಿಂದ ಸಿಎಂ ಸ್ಥಾನದಿಂದ ಅಮರೇಂದ್ರ ಸಿಂಗ್ ಅವರನ್ನು ಕೆಳಗಿಳಿಸಲಾಯಿತು.