ಬೆಂಗಳೂರು: ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರದು ಎನ್ನಲಾದ ಅಶ್ಲೀಲ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿದ್ದು ಭಾರಿ ವೈರಲ್ ಆಗುತ್ತಿದೆ. ಇಂದು ಮಧ್ಯಾಹ್ನದಿಂದಲೇ ಈ ವಿಡಿಯೋ ವ್ಯಾಟ್ಸಪ್ ಮತ್ತು ಫೇಸ್‌ಬುಕ್ ಸೇರಿ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿವಿ ಸದಾನಂದ ಆಪ್ತ ತಮ್ಮೇಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಕಲಿ ವಿಡಿಯೋ ಮೂಲಕ ಮಾಜಿ ಕೇಂದ್ರ ಸಚಿವರ ವರ್ಚಸ್ಸಿಗೆ ಧಕ್ಕೆ ಮಾಡುವಂತ ಪ್ರಯತ್ನ ನಡೆಯುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ದೂರಿನ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸರು ಕೂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಡಿಯೋ ಆಪ್‌ಲೋಡ್ ಆಗಿದ್ದು ಹೇಗೆ ಮತ್ತು ಎಲ್ಲಿ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.
ಇನ್ನು, ವಿಡಿಯೋ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ಆಗ್ರಹಿಸಿದೆ. ಬಿಜೆಪಿ ಸಂಸದರಾದ ಶ್ರೀ ಡಿ.ವಿ.ಸದಾನಂದ ಗೌಡರ ಕುರಿತಂತೆ ರಾಜಕೀಯ ದುರುದ್ದೇಶದ ಮಾರ್ಫಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಾರಿತ್ರ್ಯ ಹನನ ಮಾಡುವ ದುರುದ್ದೇಶದಿಂದ ಈ ಮಾರ್ಫಿಂಗ್ ವಿಡಿಯೋ ಸೃಷ್ಟಿಸಿದ್ದು, ಈ ವಿಡಿಯೋಗೆ ಮತ್ತು ಸಂಸದರಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಮಾರ್ಫಿಂಗ್ ವಿಡಿಯೋ ಸೃಷ್ಟಿಸಿ ತೊಂದರೆ ಕೊಡುತ್ತಿರುವವರನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಮಾಜಿ ಉಪ ಮೇಯರ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ವಕ್ತಾರರಾದ ಶ್ರೀ ಹರೀಶ್ ಅವರು ಆಗ್ರಹಿಸಿದ್ದಾರೆ.
ಈ ದುಷ್ಕತ್ಯದ ವಿರುದ್ಧ ಶ್ರೀ ತಮ್ಮೇಗೌಡ ಅವರು ಬೆಂಗಳೂರಿನ ಪೊಲೀಸ್ ಕಮೀಷನರ್, ಬೆಂಗಳೂರು ಉತ್ತರ ಡಿಸಿಪಿ, ಆರ್.ಟಿ.ನಗರ ಎಸಿಪಿ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ವಿಡಿಯೋ ಮಾರ್ಫಿಂಗ್ ಮೂಲಕ ಸಂಸದರ ಹೆಸರಿಗೆ ಮಸಿ ಬಳಿಯುವ ದುರುದ್ದೇಶವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂಥ ದುಷ್ಕತ್ಯಗಳನ್ನು ಕೈಗೊಂಡಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುವುದಾಗಿ ಶ್ರೀ ಹರೀಶ್ ಅವರು ತಿಳಿಸಿದ್ದಾರೆ.
ಸಂಸದರ ಘನತೆಗೆ ಧಕ್ಕೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಕೂಡಲೇ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.