ದಾವಣಗೆರೆ: ವಿದೇಶದಿಂದ ಆಮದಾಗುವ ರೇಷ್ಮೆಕ್ಕಿಂತ ನಮ್ಮ ರಾಜ್ಯದ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸ್ಥಳೀಯ ಪಿ.ಜಿ. ಬಡವಾಣೆಯ ಡಾ.ಎಂ.ಸಿ ಮೋದಿ ರಸ್ತೆಯಲ್ಲಿ ರೂ.125 ಕೋಟಿ ವೆಚ್ಚದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಎಂಜಿಎನ್ ವಿವೈ) ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡುತ್ತಿದ್ದರು.
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ರೈತರು ರೇಷ್ಮೆ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ನಮ್ಮ ರಾಜ್ಯದ ರೇಷ್ಮೆಗೆ ಅಧಿಕ ಬೇಡಿಕೆ ಇದೆ. ಹಾಗಾಗಿ 8 ರಿಂದ 10 ಜಿಲ್ಲೆಗಳಲ್ಲಿ ಅತೀ ಹೆಚ್ಚು ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಅಲ್ಲದೇ, ಮೂರು ಮೇಗಾ ಟೆಕ್ಸೆಟೈಲ್ ಪಾರ್ಕ್ ಆರಂಭಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಸಂಸದ ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.