ಮೈಸೂರು : ನಟ ದರ್ಶನ್ ಮಾಲೀಕತ್ವದ ಫಾರಂ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಟಿ ನರಸಿಪುರ ರಸ್ತೆಯಲ್ಲಿರುವ ದರ್ಶನ್ ಅವರ ಫಾರಂ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಕುಟುಂಬವೊಂದರ ಬಾಲಕಿಯ ಮೇಲೆ ಸೆ.13ರಂದು ರಾತ್ರಿ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ ಎಂದು ವರದಿಯಾಗಿದೆ.
ಅದೇ ಫಾರಂ ಹೌಸ್‌ನಲ್ಲಿ ಕುದುರೆಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದ ಈ ವ್ಯಕ್ತಿ ಅತ್ಯಾಚಾರ ಕುರಿತು ಯಾರಿಗೂ ತಿಳಿಸಬಾರದು ಎಂದು ಬಾಲಕಿಗೆ ಬೆದೆರಿಕೆಯೊಡ್ಡಿದ್ದ ಎನ್ನಲಾಗಿದೆ. ಸೆಪ್ಟೆಂಬರ್ 13ರಂದು ನಡೆದಿರುವ ಘಟನೆ ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ. ಸೆ.16ರಂದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಆರೋಪಿಯನ್ನು ಬಂದಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.