ಬೆಂಗಳೂರು : ಮನುಕುಲವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆಯೊಂದು ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ. 9 ತಿಂಗಳು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಆತ್ಮಹತ್ಯೆ ಶರಣಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ತಿಗಳರಪಾಳ್ಯದ ಮನೆಯೊಂದರಲ್ಲಿ ನಡೆದಿದೆ.

ತಿಗಳರಪಾಳ್ಯದಲ್ಲಿ ವಾಸವಿದ್ದ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಮೃತಪಟ್ಟ ದುರ್ದೈವಿಗಳು. ಮೃತರನ್ನು ಶಂಕರ್ ಪತ್ನಿ ಭಾರತಿ (50) ಮಗಳು ಸಿಂಚನ (33) 2ನೇ ಮಗಳು ಸಿಂಧುರಾಣಿ (30) ಮಗ ಮಧುಸಾಗರ್ (27) ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಸಿಂಚನ ಅವರ ಎರಡು ವರ್ಷದ ಪುಟ್ಟ ಕಂದಮ್ಮ ಪ್ರೇಕ್ಷಾ (2) ಅದೃಷ್ಟವಶಾತ್ ಬದುಕುಳಿದಿದ್ದಾಳೆ.
ನಾಲ್ವರು ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, 9 ತಿಂಗಳ ಮಗುವಿನ ಶವವು ಹಾಸಿಗೆಯ ಮೇಲೆ ಪತ್ತೆಯಾಗಿದೆ. 9 ತಿಂಗಳ ಮಗುವನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ಮಗುವಿನ ಸಾವು ಇನ್ನೂ ನಿಗೂಢವಾಗಿದೆ. ಕಳೆದ 4 ದಿನಗಳಿಂದ ಎರಡು ವರ್ಷದ ಮಗು ಪ್ರೇಕ್ಷಾ ಮಾತ್ರ ಮೃತದೇಹಗಳ ಮಧ್ಯೆಯೇ ತನ್ನ ಜೀವವನ್ನು ಹಿಡಿದು ಬದುಕಿತ್ತು. ಆಹಾರವಿಲ್ಲದೆ ನಿತ್ರಾಣವಾಗಿದ್ದ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿರಬಹುದು. ಆತ್ಮಹತ್ಯೆಗೆ ಶರಣಾದವರು ಏನಾದರೂ ಡೇತ್ ನೋಟ್ ಬರೆದಿದ್ದಾರೆಯೇ ಎಂಬುದನ್ನು ಬ್ಯಾಡರಹಳ್ಳಿ ಪೊಲೀಸರು ಶೋಧಿಸುತ್ತಿದ್ದಾರೆ

ಮನೆಯಲ್ಲಿ ಪ್ರತಿದಿನ ಗಲಾಟೆ ಆಗುತ್ತಿತ್ತು.ಹೀಗೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಶಂಕರ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟಿದ್ದರು. ಇದರಿಂದ ಮನನೊಂದ ಶಂಕರ್ ಪತ್ನಿ, ಪುತ್ರ, ಇಬ್ಬರು ಹೆಣ್ಣುಮಕ್ಕಳು ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ರಕರ್ತ ಶಂಕರ್ ಎಂಬುವರು 4 ದಿನಗಳ ನಂತರ ಮನೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಗೆ ಮರಳಿದ್ದ ಅವರು ಬಾಗಿಲು ಒಳಗಿಂದಲೇ ಲಾಕ್ ಆಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಡಿಸಿಪಿ (ಪಶ್ಚಿಮ) ಸಂಜೀವ್ ಎಂ.ಪಾಟೀಲ್ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಇತ್ತಿಚೆಗೆ ಬಂದ ಮಾಹಿತಿ ಪ್ರಕಾರ ಮರಣೋತ್ತರ ಪರೀಕ್ಷೆ ಮುಗಿದಿದ್ದು ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.