ಮೈಸೂರು: ಹಿಂದೂ ಧಾರ್ಮಿಕ ಕೇಂದ್ರಗಳನ್ನು ಹೊತ್ತುಗೊತ್ತಿಲ್ಲದೆ ತೊಘಲಕ್ ನೀತಿಯಂತೆ ಅಕ್ರಮವಾಗಿ ತೆರವುಗೊಳಿಸಿರುವುದಕ್ನ್ನುಕೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದೆ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ರಾಜ್ಯ ಕಾರ್ಯದರ್ಶಿ ಬಸವರಾಜು, ಸರ್ವೊಚ್ಚ ನ್ಯಾಯಾಲಯ ಆದೇಶದಂತೆ ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ, ಚರ್ಚು, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ, ಸ್ಥಳಾಂತರಿಸುವ ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸಬೇಕು. ಅದನ್ನು ವಿಎಚ್‌ಪಿ ಗೌರವಿಸುತ್ತದೆ. ಆದರೆ, ನ್ಯಾಯಾಲಯದ ಆದೇಶವನ್ನು ಸರಿಯಾಗಿ ಪಾಲಿಸದೇ ಜಿಲ್ಲಾಡಳಿತ ದೇವಸ್ಥಾನಗಳನ್ನು ಮಾತ್ರ ಕೆಡವಿರುವುದು ಖಂಡನೀಯ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಇದೆ ರೀತಿಯಾಗಿ ಹಲವಾರು ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿದ್ದರೂ. ಆದರೆ, ಮೈಸೂರಿನ ಹೃದಯ ಭಾಗದ ದೇವರಾಜ ಅರಸು ರಸ್ತೆಯಲ್ಲಿರುವ ಗೋರಿಯು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಿದ್ದರೂ ಜಿಲ್ಲಾಡಳಿತ ಭಾಗಶಃ ಪೂರ್ಣಗೊಳಿಸದೆ ಕೈ ಬಿಟ್ಟಿದೆ. ಕೇವಲ ಹಿಂದೂ ದೇವಾಲಯಗಳನ್ನು ತೆರವು ಗೊಳಿಸುವ ಮೂಲಕ ತಾರತಮ್ಯ ತೋರುತ್ತಿದೆ. ಕೋಮು ಸೌಹಾರ್ದತೆಯನ್ನು ಕದಡುವ ಜಿಲ್ಲಾಡಳಿತದ ಈ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ತೆರವಿಗೂ ಮುನ್ನ ಪ್ರತ್ಯೇಕ ನೋಟಿಸ್ ನೀಡಬೇಕು ಎಂದು ಆಗ್ರಹಿಸಿದರು. ವಿಶ್ವ ಹಿಂದೂ ಪರಿಪತ್ ಜಿಲ್ಲಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಪ್ರಶಾಂತ್, ಛಾಯಾ ನಂಜಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.